

ಮೈಸೂರಿನ ಶ್ರೀ ಸುಮತಿನಾಥ್ ಜೈನ ಶ್ವೇತಾಂಬರಮೂರ್ತಿ ಪೂಜಕ ಸಂಘದಿಂದ ಮಹಾವೀರ ಜಯಂತಿ ಮಹೋತ್ಸವ ಭಕ್ತಿಭರಿತವಾಗಿ ಆಚರಿಸಲಾಯಿತು. ಸಾವಿರಾರು ಭಕ್ತರು ಈ ಸಂಭ್ರಮದಲ್ಲಿ ಪಾಲ್ಗೊಂಡು ಶಾಂತಿ, ಸಹಿಷ್ಣುತೆ ಹಾಗೂ ಅಹಿಂಸೆಯ ಸಂದೇಶವನ್ನು ಹರಿಸಿದರು.
ಜೈನ ಧರ್ಮದ 24ನೇ ತೀರ್ಥಂಕರರಾದ ಶ್ರೀ ಭಗವಾನ್ ಮಾಹಾವೀರರ ಜನ್ಮದಿನವನ್ನು ಉಜ್ವಲವಾಗಿ ಹಾಗೂ ಭಕ್ತಿಭಾವಪೂರ್ಣವಾಗಿ ಮಾಹಾವೀರ ಜನ್ಮ ಕಲ್ಯಾಣಕ ಮಹೋತ್ಸವವಾಗಿ ಆಚರಿಸಲಾಯಿತು.
ಈ ವೇಳೆ ಮಹಾವೀರ ಭವನದಲ್ಲಿ ಭಗವಾನ್ ಮಾಹಾವೀರರ ಅಭಿಷೇಕ ಪೂಜೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಭಕ್ತರು ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸಿದ್ದರು.
ನಂತರ ಶ್ರೀ ಸುಮತಿನಾಥ್ ಜೈನ ದೇವಾಲಯದಿಂದ ಮಹಾವೀರ ಭವನದವರೆಗೆ ವೈಭವೋಪೇತ ಶೋಭಾಯಾತ್ರೆ ಜರುಗಿತು. 3000ಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು. ಶ್ರೀ ಭಗವಾನ್ ಮಹಾವೀರರ ರಥ, ಇಂದ್ರಧ್ವಜ ಮತ್ತು ಪಲ್ಲಕ್ಕಿ, ಸಂಗೀತ ಬ್ಯಾಂಡ್ ಹಾಗೂ ಸಮವಸ್ತ್ರದಲ್ಲಿ 7 ಕ್ಕೂ ಹೆಚ್ಚು ಮಹಿಳಾ ಮಂಡಳಿಯ ಸದಸ್ಯರು ಭಾಗವಹಿಸಿದ್ದರು. ಶೋಭಾಯಾತ್ರೆ ಮಹಾವೀರ ನಗರ, ಇರ್ವಿನ್ ರಸ್ತೆ, ಅಶೋಕ ರಸ್ತೆ ಮಾರ್ಗವಾಗಿ ಸಾಗಿತು.
ಮಹಾವೀರ ಭವನದಲ್ಲಿ ಧ್ವಜಾರೋಹಣವನ್ನು ಸಂಘದ ಕಾರ್ಯದರ್ಶಿ ಕಂತಿಲಾಲ್ ಗುಲೇಚಾ, ಖಜಾಂಚಿ ಪರಸ್ಮಲ್ ಸಂಗ್ವಿ, ಯುವ ಸಂಘದ ಅಧ್ಯಕ್ಷ ಜಯ್ ಸಾಲೇಚಾ ಇತರರು ನೆರವೇರಿಸಿದರು.
ಧರ್ಮಸಭೆ: ಧರ್ಮಸಭೆಯಲ್ಲಿ ಭಗವಾನ್ ಮಾಹಾವೀರರ ಜೀವನ ತತ್ವಗಳು ಮತ್ತು ಅವರ ಸಂದೇಶಗಳ ಬಗ್ಗೆ ಉಪನ್ಯಾಸ ನಡೆಯಿತು. ಸಂಘದ ಸದಸ್ಯರು ಸಮವಸ್ತ್ರದಲ್ಲಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.