

ಬೆಟ್ಟದಪುರ: ಸಮೀಪದ ಕಿತ್ತೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಶ್ರೀ ಕಿತ್ತೂರಮ್ಮನ ಬಂಡಿ(ಸಣ್ಣತೇರು) ಉತ್ಸವದೊಂದಿಗೆ ಹಬ್ಬ ಸಂಪನ್ನಗೊಂಡಿತ್ತು.
ಕಿತ್ತೂರು ಗ್ರಾಮ ಸೇರಿದಂತೆ ಈ ವ್ಯಾಪ್ತಿಯ ಹದಿನೆಂಟು ಕೊಪ್ಪಲು ಗ್ರಾಮಗಳ ಭಕ್ತರು ಒಟ್ಟಾಗಿ ಸೇರಿ ಸುಮಾರು 14 ವರ್ಷಗಳ ಬಳಿಕ ಶ್ರೀ ಕಿತ್ತೂರಮ್ಮನ ಬಂಡಿ ಉತ್ಸವದಲ್ಲಿ ಪಾಲ್ಗೊಂಡು ದೇವಿಯ ಆರಾಧನೆಯ ಭಕ್ತಿಭಾವದಲ್ಲಿ ತೆಲಿದರು.
ಶ್ರೀ ಕಿತ್ತೂರಮ್ಮನ ದೇವಸ್ಥಾನದಿಂದ ಶ್ರೀ ಕಿತ್ತೂರಮ್ಮನ(ದುರ್ಗಾಪರಮೇಶ್ವರಿ) ದೇವಿಯ ಉತ್ಸವ ಮೂರ್ತಿಯನ್ನು ಸಂಪ್ರದಾಯದಂತೆ ಗ್ರಾಮದ ಕುರ್ಜುನ ಬಳಿಯ ಆಂಜನೇಯ ಸ್ವಾಮಿ ದೇವಸ್ಥಾನ ಬಳಿಗೆ ಕರೆ ತರಲಾಯಿತು. ರಾತ್ರಿ 11 ಗಂಟೆ ವೇಳೆಗೆ ಸಲ್ಲುವ ಶುಭಲಗ್ನದಲ್ಲಿ ವಿವಿಧ ಪುಷ್ಪಗಳಿಂದ ಅಲಂಕೃತಗೊಂಡ ಬಂಡಿ(ಸಣ್ಣ ತೇರಿ)ಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಬಂಡಿ ಉತ್ಸವಕ್ಕೆ ಚಾಲನೆ ನೀಡಲಾಯಿತು. ಬಂಡಿ ಸಾಗುವ ದಾರಿ ಉದ್ದಕ್ಕೂ ವಿಶೇಷ ಪೂಜೆಗಳು ನಡೆದವು. ಈ ವೇಳೆ ದೇವಿಯಲ್ಲಿ ಹರಕೆ ಮಾಡಿಕೊಂಡಿದ್ದ ಭಕ್ತರು ವಿವಿಧ ರೂಪದಲ್ಲಿ ತಮ್ಮ ಹರಕೆ ತಿರಿಸುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಸಿದರು.
ತಂಬಿಟ್ಟು ಹಿಡಿದು ಭಕ್ತಿ ಸಮರ್ಪಣೆ: ಶ್ರೀ ಕಿತ್ತೂರಮ್ಮನ ದೇವಿಯ ಬಂಡಿ ಉತ್ಸವದಲ್ಲಿ ಸುಮಾರು ಹದಿನೆಂಟು ಕೊಪ್ಪಲುಗಳ ಮಹಿಳಾ ಭಕ್ತರು ತಂಬಿಟ್ಟಿನ ದೀಪದೊಂದಿಗೆ ಹೆಜ್ಜೆ ಹಾಕಿದರು. ರಾತ್ರಿ ಆರಂಭಗೊಂಡ ಉತ್ಸವ ಶನಿವಾರ ಮುಂಜಾನೆವರೆಗೂ ನಡೆಯಿತು. ಬಂಡಿಯು ದೇವಿಯ ಗುಡಿಗೆ ತಲುಪಿತು. ಈ ವೇಳೆ ವಿವಿಧ ಪೂಜಾ ಕೈಂಕರ್ಯ ನಡೆದವು. ಕೊಂಡೋತ್ಸವದಲ್ಲಿ ಭಕ್ತರು ಪಾಲ್ಗೊಂಡರು.
ಮೆರವಣಿಗೆಯಲ್ಲಿ ನಗಾರಿ ಕುಣಿತ, ತಂಬಿಟ್ಟಿನ ಆರತಿ, ಶಿವ, ಗಣಪತಿ ಹೀಗೆ ಹಲವರು ರೀತಿಯ ದೇವರ ವೇಷಾಧಾರಿಗಳು ಸಾಗುವ ಮೂಲಕ ಬಂಡಿ ಉತ್ಸವಕ್ಕೆ ಮತ್ತಷ್ಟು ಮೆರುಗು ತಂದರು. ಉತ್ಸವದ ಅಂಗವಾಗಿ ಗ್ರಾಮದ ಪ್ರಮುಖ ಬೀದಿ, ವೃತ್ತಗಳು ಮತ್ತು ದೇವಸ್ಥಾನ ಬಣ್ಣ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸುತ್ತಿದ್ದವು. ಹದಿನಾಲ್ಕು ವರ್ಷಗಳ ಬಳಿಕ ಹಬ್ಬ ನಡೆದ ಹಿನ್ನೆಯಲ್ಲಿ ಗ್ರಾಮದ ದೂರದ ಊರುಗಳಿಂದ ಕುಟುಂಬಸ್ಥರು ಮತ್ತು ಸಂಬಂಧಿಕರು ಆಗಮಿಸಿ ದೇವಿಗೆ ಪೂಜೆ ಸಲ್ಲಿಸಿದರು.
ಹಬ್ಬಕ್ಕೆ ತೆರೆ: ಬಂಡಿ ಉತ್ಸವದ ಅಂಗವಾಗಿ ಜೂನ್ ತಿಂಗಳ ಆರಂಭದಲ್ಲೇ ಮಾದೇಶ್ವರನ ಪರ ಆಚರಣೆ, ಹೊಸಬಾವಿ ತೋಡಿ ಕಳಶ ಪೂಜೆ ಮತ್ತು ಅನ್ನದಾನ, ಹನುಮಗುಡಿಗೆ ಒಂಭತ್ತು ಮಾದರಿಯ ಹರಿಸೇವೆ, ಹನುಮನ ಪರ ಹೀಗೆ ಹಲವು ಧಾರ್ಮಿಕ ಕೈಕಂರ್ಯ ನೆರವೇರಿದ್ದವು. ಶುಕ್ರವಾರ ರಾತ್ರಿ ಬಂಡಿ ಉತ್ಸವದೊಂದಿಗೆ ಹಬ್ಬಕ್ಕೆ ತೆರೆ ಬಿದ್ದಿತ್ತು.
ಶಕ್ತಿದೇವತೆ ಕಿತ್ತೂರಮ್ಮ: ಗ್ರಾಮದ ಶ್ರೀ ಕಿತ್ತೂರಮ್ಮನ ದೇವಾಲಯ ಶಕ್ತಿದೇವತೆಯ ಗುಡಿಯಾಗಿದೆ. ದೇವಿಯ ಆರಾಧನೆಗಾಗಿ ವರ್ಷಕ್ಕೊಮ್ಮೆ ಕಿತ್ತೂರಮ್ಮನ ಜಾತ್ರೆ ನಡೆಯುತ್ತದೆ. ಅದೇ ರೀತಿ 10ರಿಂದ 15 ವರ್ಷಗಳಿಗೊಮ್ಮೆ ಬಂಡಿ ಉತ್ಸವ ನಡೆಯುವುದು ಅಂದಿನಿಂದಲೂ ವಾಡಿಕೆಯಾಗಿ ಬಂದಿದೆ. ಗ್ರಾಮದಲ್ಲಿ ಶ್ರೀ ಕಿತ್ತೂರಮ್ಮನ ದೇವಾಲಯದ ಜತೆಗೆ ಶ್ರೀ ಸೋಮೇಶ್ವರ, ಶ್ರೀ ಕೋಡಿಲಿಂಗೇಶ್ವರ, ಶ್ರೀ ಬಂದಂತಮ್ಮ, ಶ್ರೀ ಆದಿನಾರಾಯಣಸ್ವಾಮಿ, ಶ್ರೀ ಆಂಜನೇಯ ಹಾಗೂ ಶ್ರೀ ಗುರುಮೂರ್ತಿ ಗುಡಿಗಳಿದ್ದು, ಅಲ್ಲಿ ನಿತ್ಯ ಪೂಜಾ ಕೈಂಕರ್ಯ ನಡೆಯುತ್ತವೆ.