

ಸರಗೂರು: ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ಬುಧವಾರ ಶ್ರೀ ಕಾಳಿಕಾಂಬ ಮಹೇಶ್ವರಿ ಕಾಳಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿತು.
ಹರಕೆಯ ನಿಮಿತ್ತ ಹೆಂಗಸರು ಮತ್ತು ಮಕ್ಕಳು ಬಾಯಿಗೆ ಬೀಗ ಹಾಕಿಸಿಕೊಂಡರು. ತಾಲೂಕಿನ ಕಾಡಂಚಿನ ಭಾಗದಲ್ಲಿ ತಾಯಿಯ ಜಾತ್ರೆ ಇದಾಗಿದ್ದು, ತಾಯಿಗೆ ಕನಕಾಂಬರ ಹೂವುಗಳಿಂದ ಅಲಂಕರಿಸಿ, ಉತ್ಸವದಲ್ಲಿ ದೊಡ್ಡ ಬಂಡಿಗಳನ್ನು ಎಳೆಯುವುದು ಈ ಜಾತ್ರೆಯ ವಿಶೇಷತೆಯಾಗಿದ್ದು, ಬಂಡಿಯನ್ನು ಭಕ್ತರು ಹರ್ಷೋದ್ಘಾರದೊಂದಿಗೆ ಎಳೆದರು.
ದೇವಸ್ಥಾನದವರೆಗೆ ಮಂಗಳವಾದ್ಯ, ವೀರಗಾಸೆ, ಬ್ಯಾಂಡ್‌ಸೆಟ್ ಮೂಲಕ ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿದರು. ಜಾತ್ರೆಗೆ ರಾಜ್ಯದ ವಿವಿಧ ಭಾಗಗಳಿಂದಲ್ಲದೆ ಎಚ್.ಡಿ. ಕೋಟೆ ಮತ್ತು ನಂಜನಗೂಡಿನ ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸಿದರು.
ಇನ್ನೊಂದು ಕಡೆ ಹೆಣ್ಣು ಮಕ್ಕಳು ದೀಪ ನೀಡಿ ಹರಕೆ ಅರ್ಪಿಸಿದರು. ಈ ಗ್ರಾಮದ ಹುಡುಗಿ ಅಥವಾ ಸೊಸೆಯಾಗಿ ಗ್ರಾಮಕ್ಕೆ ಕಾಲಿರಿಸಿದವಳು ತಲೆ ಮೇಲೆ ದೀಪವನ್ನಿರಿಸಿಕೊಂಡು ದೇವಸ್ಥಾನದಿಂದ ಮಹೇಶ್ವರಿ ಕಾಳಮ್ಮನ ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಬಂದು ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪ ತೋರಿಸಿ ಭಕ್ತಿ ಪ್ರದರ್ಶಿಸಿದರು. ಕಾಳಿಕಾಂಬ ಮಹೇಶ್ವರಿ ಕಾಳಮ್ಮ ದೀಪದಿಂದ ಆರತಿ ಬೆಳಗಿದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಶಿವಣ್ಣೇಗೌಡ, ಉಪಾಧ್ಯಕ್ಷ ಚೆಲುವೇಗೌಡ, ಎಚ್.ಕೆ. ಶಂಭುಲಿಂಗಯ್ಯ, ಕಾರ್ಯದರ್ಶಿ ಸತೀಶ್‌ಗೌಡ, ಖಜಾಂಚಿ ರವಿಗೌಡ, ಸಹ ಕಾರ್ಯದರ್ಶಿ ಎಂ.ಸಿ. ಮೊಹನಕುಮಾರ್, ಸಮಿತಿ ಸದಸ್ಯ ಗೋವಿಂದೇಗೌಡ, ಸೋಮೇಗೌಡ, ಮಾದಯ್ಯ, ಮಹದೇವಗೌಡ, ರವಿಗೌಡ, ಜಯರಾಮೇಗೌಡ, ವೆಂಕಟಶೆಟ್ಟಿ, ಮಹದೇವಗೌಡ, ಮಾದೇಗೌಡ, ಶಿವಲಿಂಗೇಗೌಡ, ಗ್ರಾಪಂ ಸದಸ್ಯ ಸುಧೀರ್, ಸಣ್ಣಸ್ವಾಮಿ ಹಲವರಿದ್ದರು.