

ರಾಯಲ್ಪಾಡು: ಯಾರಲ್ಲಿ ಶ್ರದ್ಧೆ, ಭಕ್ತಿ, ಗುರಿ ಸಾಧಿಸಬೇಕೆಂಬ ಛಲ ಇರುತ್ತದೆಯೋ ಅವರಿಗೆ ವಿದ್ಯಾದೇವತೆ ಒಲಿಯುತ್ತಾಳೆ ಎಂಬುದಕ್ಕೆ ರಾಯಲ್ಪಾಡು ಸಮೀಪದ ಮಂಚಿನೀಳ್ಳಕೋಟೆಯ ರೈತನ ಮಗ ಎಂ.ಜಿ.ವೆಂಕಟೇಶ್ ಸಾಕ್ಷಿಯಾಗಿದ್ದಾರೆ.
ಪ್ರಸ್ತುತ ಸಿವಿಲ್ ಸರ್ವೀಸ್ ಆಯ್ಕೆ ಪಟ್ಟಿಯಲ್ಲಿ 82ನೇ ರ‍್ಯಾಂಕ್ ಪಡೆದು ಐಎಫ್ಎಸ್ನಲ್ಲಿ ಆಯ್ಕೆಯಾಗುವ ಮೂಲಕ ರೈತನ ಮಗ ಸಾಧಿಸಿ ತೋರಿಸಿದ್ದಾನೆ. ಮಂಚಿನೀಳ್ಳಕೋಟೆಯ ಕೃಷಿಕ ಗಂಗಪ್ಪ, ಲಕ್ಷ್ಮಿ ನರಸಮ್ಮ ದಂಪತಿಯ ಎಂ.ಜಿ.ವೆಂಕಟೇಶ್ ಹಾಗೂ ಎಂ.ಜಿ.ಮುರಳಿ ಇಬ್ಬರೂ ಸರ್ಕಾರಿ ಶಾಲೆಗಳಲ್ಲಿಯೇ ಉನ್ನತ ಶಿಕ್ಷಣ ಪಡೆದಿದ್ದಾರೆ.
ಎಂ.ಜಿ.ವೆಂಕಟೇಶ್ 1ರಿಂದ 5 ನೇ ತರಗತಿವರೆಗೂ ಗ್ರಾಮದ ಸರ್ಕಾರಿ ಶಾಲೆಯಲ್ಲಿ, 6 ರಿಂದ 7 ನೇ ತರಗತಿ ಮರಿಮಾಕಲಪಲ್ಲಿ ಸರ್ಕಾರಿ ಶಾಲೆಯಲ್ಲಿ, 8ರಿಂದ 10ನೇ ತರಗತಿ ರಾಯಲ್ಪಾಡಿನ ಪ್ರೌಢಶಾಲೆ, ಪದವಿ ಶಿಕ್ಷಣವನ್ನು ಬೈರವೇಶ್ವರ ವಿದ್ಯಾನಿಕೇತನ ಕಾಲೇಜಿನಲ್ಲಿ ಪಡೆದು, ಪ್ರಥಮ ದರ್ಜೆ ಶಿಕ್ಷಣವನ್ನು ಬೆಂಗಳೂರಿನ ಜಿಕೆವಿಕೆ, ದೆಹಲಿಯ ಇಂಡಿಯನ್ ಅಗ್ರಿಕಲ್ಚರಲ್ ಸಂಶೋಧನಾ ಸಂಸ್ಥೆಯಲ್ಲಿ ಎಂಎಸ್ಸಿ (ಅಗ್ರಿ) ಪದವಿ ಹಾಗೂ ಪಿಎಚ್ಡಿ ಪದವಿ ಪಡೆದಿದ್ದಾರೆ. ದೆಹಲಿಯಲ್ಲಿಯೇ ಸಿವಿಲ್ ಸರ್ವೀಸ್ಗೆ ಹಿರಿಯ ವಿದ್ಯಾರ್ಥಿಗಳ ಮಾರ್ಗದರ್ಶನದೊಂದಿಗೆ ಐಎಫ್ಎಸ್ಗೆ ಓದಲು ಪ್ರಾರಂಭಿಸಿ, 2018 ಹಾಗೂ 2020 ರಲ್ಲಿ ಸಿವಿಲ್ ಸರ್ವೀಸ್ ಸಂದರ್ಶನ ಪಡೆದುಕೊಂಡಿದ್ದರೂ ಆಯ್ಕೆಯಾಗಲಿಲ್ಲ. ಕೊನೆಗೆ ಈ ಬಾರಿಯ ಪಟ್ಟಿಯಲ್ಲಿ 82ನೇ ರ‍್ಯಾಂಕ್ ಪಡೆದು ಐಎಫ್ಎಸ್ನಲ್ಲಿ ಆಯ್ಕೆಯಾಗಿದ್ದಾರೆ.
ತಂದೆ ಗಂಗಪ್ಪ, ತಾಯಿ ಲಕ್ಷ್ಮಿನರಸಮ್ಮ, ತಮ್ಮ ಎಂ.ಜಿ.ಮುರಳಿ, ದೊಡ್ಡಪ್ಪ ಜಯರಾಮಪ್ಪ, ಜಯಲಕ್ಷ್ಮಮ್ಮ , ಬೆಂಬಲ ಹಾಗೂ ನನ್ನ ಹಿರಿಯ ಸಂಗಡಿಗರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಯಿತು. ನಾನು ಪರಿಸರ ರಕ್ಷಣೆ ಮಾಡಬೇಕು ಎಂಬ ಆಸೆಯಿಂದ ಈ ವೃತ್ತಿ ಆಯ್ಕೆ ಮಾಡಿಕೊಂಡಿದ್ದೇನೆ.
ಎಂ.ಜಿ.ವೆಂಟೇಶ್, ಐಎಫ್ಎಸ್ಗೆ ಆಯ್ಕೆಯಾದವರು.
ನನ್ನ ಅಣ್ಣ ದೆಹಲಿಯಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾಗ ನನಗೆ ಹರಿಯಾಣದ ಕೆನರಾ ಬ್ಯಾಂಕ್ನಲ್ಲಿ ಕೆಲಸ ಸಿಕ್ಕಿತು. ಅಣ್ಣನನ್ನು ನೋಡಲು ಹೋಗುತ್ತಿದ್ದೆ, ಅವನು ಗುರಿ ಮುಟ್ಟಲು ಬೆಂಬಲ ನೀಡಿ ಪ್ರೋತ್ಸಾಹಿಸುತ್ತಿದ್ದೆ. ನನ್ನ ಅಣ್ಣ ಗುರಿ ಸಾಧಿಸಿದ್ದು ತುಂಬಾ ಸಂತೋಷವಾಗುತ್ತಿದೆ.
ಎಂ.ಜಿ.ಮುರಳಿ, ಕೆನರಾ ಬ್ಯಾಂಕ್ ಸಹ ವ್ಯವಸ್ಥಾಪಕ, ಮಾಲೂರು
ನನ್ನ ಕಷ್ಟಕ್ಕೆ ಫಲ ಸಿಕ್ಕಿದೆ. ನನ್ನ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಲಿ ಎಂದು ಹಗಲಿರುಳು ಕಷ್ಟಪಟ್ಟಿದ್ದು, ಇಂದು ನನ್ನ ಮಗನಿಗೆ ಒಳ್ಳೆಯ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗುತ್ತಿದೆ.
ಗಂಗಪ್ಪ, ವೆಂಕಟೇಶ್ ತಂದೆ, ಮಂಚಿನೀಳ್ಳಕೋಟೆ