

ಚೌಳಹಿರಿಯೂರು: ಮಾದಕ ವಸ್ತುಗಳ ಸಾಗಣೆ ಸೇರಿ ವಿವಿಧ ರೀತಿಯ ಕಾನೂನು ಬಾಹಿರ ಚಟುವಟಿಕೆಗೆ ಮಹಿಳೆಯರು ಮತ್ತು ಮಕ್ಕಳನ್ನು ಬಳಸಿಕೊಳ್ಳಲಾಗುತ್ತಿದ್ದು, ಅಂಥವರನ್ನು ಗುರುತಿಸಿ ರಕ್ಷಣೆ ನೀಡಿ ನ್ಯಾಯ ಒದಗಿಸಬೇಕು ಎಂದು ವಿಕಸನ ಸಂಸ್ಥೆ ಅಧ್ಯಕ್ಷ ಎ.ಎಂ.ವರ್ಗಿಸ್ ಕೀಟಸ್ ಹೇಳಿದರು. ರಾಂಪುರ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತರೀಕೆರೆಯ ವಿಕಸನ ಸಂಸ್ಥೆ ಆಯೋಜಿಸಿದ್ದ ವಿಶ್ವ ಮಾನವ ಕಳ್ಳಸಾಗಣೆೆ ವಿರೋಧಿ ದಿನಾಚರಣೆಯಲ್ಲಿ ಮಾತನಾಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಗೋವಿಂದ ಸ್ವಾಮಿ ಮಾತನಾಡಿ, ಮಾನವ ಕಳ್ಳಸಾಗಣೆಗೆ ಅನಕ್ಷರತೆ ಹಾಗೂ ಬಡತನ ಕಾರಣವಾಗಿದೆ ಎಂದರು. ಕಾರ್ಮಿಕ ಇಲಾಖೆ ಹಿರಿಯ ಕಾರ್ಮಿಕ ಪ್ರವೀಣ್‌ಕುಮಾರ್ ಮಾತನಾಡಿ, ಹೊರ ರಾಜ್ಯದಿಂದ ನಮ್ಮ ರಾಜ್ಯಕ್ಕೆ ಬಾಲಕಾರ್ಮಿಕರನ್ನು ಮತ್ತು 18 ವರ್ಷದೊಳಗಿನ ಕಿಶೋರಿಯರನ್ನು ಬಳಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಈ ರೀತಿ ಕಂಡುಬಂದರೆ ಮಕ್ಕಳ ಸಹಾಯವಾಣಿ 1098 ಉಚಿತ ಕರೆ ಮಾಡಿ ಎಂದು ಮಾಹಿತಿ ನೀಡಿದರು. ವೈದ್ಯಾಧಿಕಾರಿ ಡಾ. ರಶ್ಮಿ ಮಾತನಾಡಿ, ಬಾಲ್ಯವಿವಾಹದಿಂದ ಆಗುವ ದುಷ್ಪರಿಣಾಮಗಳ ಅರಿವು ಮೂಡಿಸಿದರು. ವಕೀಲರ ಸಂಘದ ಕಾರ್ಯದರ್ಶಿ ರೇಣುಕಾ ಪ್ರಸಾದ್ ಪ್ರತಿಜ್ಞಾವಿಧಿ ಬೋಧಿಸಿದರು. ಗ್ರಾಪಂ ಅಧ್ಯಕ್ಷೆ ಸುಮಾ ಮಹೇಶ್, ಸದಸ್ಯೆ ಎಚ್.ಬಿ.ನಾಗಮ್ಮ, ಕಾರ್ಯಕರ್ತೆ ಜಯಮ್ಮ, ದಯಾಕುಮಾರ್, ಎಲ್.ಮುಕುಂದ, ಮಾದಪ್ಪ, ಭಾರತಿ ಇದ್ದರು.