

ಚಿತ್ರದುರ್ಗ: ದೇಶದ ಗಮನಸೆಳೆದಿರುವ, ರಾಜ್ಯದಲ್ಲೇ ಅತಿ ಹೆಚ್ಚು ಜನರು ಭಾಗವಹಿಸುವ ಹಿಂದು ಮಹಾಗಣಪತಿ ಮಹೋತ್ಸವದ ಶೋಭಾಯಾತ್ರೆಗೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಕೋಟೆನಗರಿ ಸಂಪೂರ್ಣ ಸಿಂಗಾರಗೊಂಡಿದ್ದು, ಅನೇಕರನ್ನು ಕೈ ಬೀಸಿ ಕರೆಯುತ್ತಿದೆ.
ಶೋಭಾಯಾತ್ರೆ ಅಂಗವಾಗಿ ಚಳ್ಳಕೆರೆ ರಸ್ತೆಯಿಂದ ಹೊಳಲ್ಕೆರೆ ರಸ್ತೆಯ ಕನಕ ವೃತ್ತದವರೆಗೂ ವಿವಿಧ ವರ್ಣಗಳಲ್ಲಿ ಝಗಮಗಿಸುತ್ತಿರುವ ವೈವಿಧ್ಯಮಯ ವಿದ್ಯುದ್ದೀಪಾಲಂಕಾರ ಸಾಂಸ್ಕೃತಿಕ ನಗರಿ ಮೈಸೂರು ದಸರಾವನ್ನೇ ನೆನಪಿಸುವಂತಿದ್ದು, ಜನಾಕರ್ಷಣೆಯ ಕೇಂದ್ರವಾಗಿದೆ.
ಈ ಬಾರಿ 3ಲಕ್ಷದಿಂದ 5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಸೆ. 28ರ ಶನಿವಾರ ಜನಸಾಗರದ ಮಧ್ಯೆ ಸಾಗುವ ಮಹಾಗಣಪನ ಶೋಭಾಯಾತ್ರೆ ಕಣ್ತುಂಬಿಕೊಳ್ಳಲು ಅಸಂಖ್ಯಾತ ಭಕ್ತರು ಕಾತರದಿಂದ ಕಾಯುತ್ತಿದ್ದಾರೆ. ನಾಡಿನ ವಿವಿಧ ಕಲಾ ತಂಡಗಳು ಮೆರವಣಿಗೆಯ ಮೆರಗು ಹೆಚ್ಚಿಸಲಿವೆ.
ಮಹಾಗಣಪನ ವಿಸರ್ಜನಾ ಮಹೋತ್ಸವಕ್ಕೆ ಇಡೀ ನಗರ ಈಗಾಗಲೇ ಕೇಸರಿಮಯವಾಗಿದೆ. ಇದಕ್ಕಾಗಿ ಸಾವಿರಾರು ಮೀಟರ್ ಕೇಸರಿ ಬಟ್ಟೆ ಬಳಸಲಾಗಿದೆ. ಎಂಜಿ ಸರ್ಕಲ್ ಬಳಿ 20 ಅಡಿ ಮೇಲ್ಭಾಗದಲ್ಲಿ ಪ್ರತಿಷ್ಠಾಪಿಸಿರುವ ಶ್ರೀರಾಮನ ಮೂರ್ತಿ ಗಮನ ಸೆಳೆಯುತ್ತಿದೆ.
ಕೈಲಾಸ ಮಾದರಿ: ಮದಕರಿನಾಯಕ ಪ್ರತಿಮೆ ಹಿಂಭಾಗ ಕೈಲಾಸ ಹೋಲುವ ಮಾದರಿ ನಿರ್ಮಿಸಿದ್ದು, ತ್ರಿಶೂಲ-ಶಿವಲಿಂಗು ಕಂಗೊಳಿಸುತ್ತಿದೆ. ಮುಂಭಾಗ ವ್ನಿೇಶ್ವರ, ನಂದಿ, ದ್ವಾರಪಾಲಕೆಯರ ಚಿತ್ರಗಳುಳ್ಳ ವಿದ್ಯುದ್ದೀಪಾಲಂಕಾರ ಆಕರ್ಷಿಸುತ್ತಿದೆ.
ವೃತ್ತಗಳಲ್ಲಿ ಹೆಚ್ಚಾದ ಸೆಲ್ಫಿ ಕ್ರೇಜ್: ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂವಿಧಾನ, ಕನಕ ವೃತ್ತ-ವೈಷ್ಣವ ಪರಂಪರೆ, ವೀರವನಿತೆ ಒನಕೆ ಓಬವ್ವ-ಪ್ರಾಣಿ, ಪಕ್ಷಿಗಳು, ಮಹಾವೀರ, ವಾಸವಿ, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ ವೃತ್ತಗಳಲ್ಲಿ ಧಾರ್ಮಿಕ, ಸಾಂಸ್ಕೃತಿಕ ಚಿಹ್ನೆಗಳ ವಿದ್ಯುದ್ದೀಪಾಲಂಕಾರ ಮಾದರಿ ಜನರನ್ನು ತನ್ನತ್ತ ಸೆಳೆಯುತ್ತಿವೆ. ಬೆಳಕಿನ ಚಿತ್ತಾರದೊಂದಿಗೆ ಕಾರಂಜಿ ಕಣ್ತುಂಬಿಕೊಳ್ಳಲು ಶುಕ್ರವಾರ ಸಂಜೆಯ ಬಳಿಕ ಸೆಲ್ಫಿ ಕ್ರೇಜ್ ಹೆಚ್ಚಾಗಿದೆ.
ಶೋಭಾಯಾತ್ರೆ ಸಾಗುವ ಮಾರ್ಗದುದ್ದಕ್ಕೂ ‘ಓಂ’, ‘ಆಂಜನೇಯಸ್ವಾಮಿ’ ಭಾವಚಿತ್ರದ ಬೃಹತ್ ಧ್ವಜಗಳನ್ನು ಕಟ್ಟಲಾಗಿದೆ. ದೀಪಾಲಂಕಾರವೂ ಚಿಣ್ಣರನ್ನು ಸೆಳೆಯುತ್ತಿವೆ. ಅಂಗಡಿ ಮುಂಗಟ್ಟುಗಳು ಇದಕ್ಕೆ ಹೊರತಾಗಿಲ್ಲ. ಇದಲ್ಲದೆ ಯಾತ್ರೆಗೆ ಶುಭಾಶಯ ಕೋರುವ ಬ್ಯಾನರ್, ಬಂಟಿಗ್ಸ್‌ಗಳು, ಗಣ್ಯರ, ರಾಜಕೀಯ ಮುಖಂಡರ ಆಳೆತ್ತರದ ಕಟೌಟ್‌ಗಳು ಎದ್ದು ನಿಂತಿವೆ.
ಶೋಭಾಯಾತ್ರೆಯ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಗ ಬಯಸಿ ರಾಜ್ಯದ ಮೂಲೆ-ಮೂಲೆಗಳ ಜನರು ಚಿತ್ರದುರ್ಗದತ್ತ ಹರಿದು ಬರಲಿದ್ದಾರೆ. ಸ್ನೇಹಿತರು, ಬೀಗರು, ನೆಂಟರಿಷ್ಟರು ಒಂದು ದಿನ ಮುಂಚೆಯೇ ಆಗಮಿಸಿದ್ದಾರೆ.
ಶೋಭಾಯಾತ್ರೆಗೆ ಬೆಳಗ್ಗೆ ಚಾಲನೆ: ಜೈನಧಾಮ ಬಳಿ ಪ್ರತಿಷ್ಠಾಪಿಸಿರುವ ಹಿಂದು ಮಹಾಗಣಪತಿಗೆ ಶನಿವಾರ ಬೆಳಗ್ಗೆ 10ಕ್ಕೆ ಮಹಾಮಂಗಳಾರತಿ ಪೂಜೆ ನೆರವೇರಿಸುವ ಮೂಲಕ ಶೋಭಾಯಾತ್ರೆಗೆ ಬಜರಂಗದಳ ರಾಷ್ಟ್ರೀಯ ಸಂಯೋಜಕ ನೀರಜ್ ದೊನೇರಿಯಾ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಪೂರಿ ಜಗನ್ನಾಥ ಸ್ವಾಮಿ ಸನ್ನಿಧಿಯ ಮಾದರಿ, ಬಾವುಟ, ಮೂರು ಹಾರಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ವಿಎಚ್‌ಪಿ ಮತ್ತು ಬಜರಂಗದಳದ ಪ್ರಮುಖರು ಭಾಗವಹಿಸಲಿದ್ದಾರೆ.
ಉಪಾಹಾರ ವ್ಯವಸ್ಥೆ: ರಾಜ್ಯದ ವಿವಿಧ ಭಾಗಗಳಿಂದ ಆಗಮಿಸುವ ಲಕ್ಷಾಂತರ ಜನರಿಗೆ ಉಚಿತ ಊಟ, ಉಪಾಹಾರ, ನೀರಿನ ವ್ಯವಸ್ಥೆ ಕಲ್ಪಿಸಲು ಹಲವು ಸಂಘಟನೆಗಳು ಟೊಂಕ ಕಟ್ಟಿ ನಿಂತಿವೆ. ಶೋಭಾಯಾತ್ರೆ ಸಾಗುವ ಮಾರ್ಗ ಮಧ್ಯೆ ಪುಲಾವ್, ಪುಳಿಯೊಗರೆ, ಚಿತ್ರನ್ನ, ಮೊಸರನ್ನ, ನೀರು, ಮಜ್ಜಿಗೆ ವಿತರಿಸಲು ಸಿದ್ಧತೆಗಳು ನಡೆಯಲಿವೆ. ಬಾಣಸಿಗರು ಶುಕ್ರವಾರ ರಾತ್ರಿಯಿಂದಲೇ ಅಡುಗೆಗೆ ಸಿದ್ಧತೆ ಆರಂಭಿಸಲಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ: ಶೋಭಾಯತ್ರೆಯು ಯುಟ್ಯೂಬ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಲಿದೆ. ಯುವಸಮೂಹ ಶುಕ್ರವಾರವೂ ಮಂಟಪದ ಮುಂಭಾಗ ಸೆಲ್ಫಿಗೆ ಮುಗಿಬಿದ್ದಿದ್ದರು. ನಗರದೊಳಗೆ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ಸೇರಿ ಭಾರೀ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಪರ್ಯಾಯ ಮಾರ್ಗ ಕಲ್ಪಿಸಲಾಗಿದೆ.
ಸರಗಳ್ಳರ ಕುರಿತು ಎಚ್ಚರ ಇರಲಿ: ಸರಗಳ್ಳರು, ಜೇಬುಗಳ್ಳರು, ಮೊಬೈಲ್ ಕಳ್ಳರು ಮೊದಲಾದ ದುಷ್ಕರ್ಮಿಗಳ ಪತ್ತೆಗೆ ವಿವಿಧ ಜಿಲ್ಲೆಗಳಿಂದ ಅಪರಾಧ ಪತ್ತೆ ವಿಭಾಗದ ಪೊಲೀಸರು ಬಂದಿಳಿದಿದ್ದಾರೆ. ಆದರೂ ಜನರು ಬೆಲೆ ಬಾಳುವ ಆಭರಣ ಧರಿಸದೆ, ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳಿ. ಒಂದು ವೇಳೆ ಧರಿಸಿದರೂ ವಸ್ತುಗಳ ಕುರಿತು ಎಚ್ಚರವಹಿಸುವಂತೆ ಪೊಲೀಸ್ ಇಲಾಖೆ ಸಲಹೆ ನೀಡಿದೆ.
ಮಾರುಕಟ್ಟೆ ಸ್ತಬ್ಧ: ಬಹುತೇಕ ಇಡೀ ಊರಿನ ವ್ಯಾಪಾರ-ವಹಿವಾಟು ಶನಿವಾರ ಸ್ತಬ್ಧವಾಗಲಿದ್ದು, ತರಕಾರಿ, ಹಣ್ಣು, ಹೂವಿನ ಮಾರುಕಟ್ಟೆ ಕೂಡ ಇದಕ್ಕೆ ಹೊರತಾಗಿಲ್ಲ. ಹೀಗಾಗಿ ಶುಕ್ರವಾರವೇ ಅನೇಕರು ಖರೀದಿಸುವ ಸಾಧ್ಯತೆ ಇದೆ. ಗಾಂಧಿ ವೃತ್ತ, ಸಂತೆ ಹೊಂಡ, ಮೆದೇಹಳ್ಳಿ ರಸ್ತೆ ಬಳಿ ಹೆಚ್ಚು ಜನಜಂಗುಳಿ ಉಂಟಾಗುವ ನಿರೀಕ್ಷೆ ಇದೆ.