ಶೈಕ್ಷಣಿಕ ಕ್ಷೇತ್ರದ ಪ್ರಗತಿಗೆ ಪ್ರಥಮ ಆದ್ಯತೆ

HYR sudhakar
Published on

ಹಿರಿಯೂರು: ತಾಲೂಕನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ಗುರಿ ಹೊಂದಲಾಗಿದೆ ಎಂದು ಯೋಜನೆ-ಸಾಂಖ್ಯಿಕ ಸಚಿವ ಡಿ.ಸುಧಾಕರ್ ಹೇಳಿದರು.

ತಾಲೂಕಿನ ಯಲದಕೆರೆ ಮುರಾರ್ಜಿ ವಸತಿ ಶಾಲೆಗೆ ಶನಿವಾರ ಭೇಟಿ ನೀಡಿ, ಮೂಲ ಸೌಲಭ್ಯ-ಶೈಕ್ಷಣಿಕ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ನೆರವಾಗಲು ತಾಲೂಕಿನ ದೇವರಕೊಟ್ಟ, ಐಮಂಗಲ, ವಿವಿ ಪುರ, ಜೆ.ಜಿ.ಹಳ್ಳಿ, ಯಲದಕೆರೆ ಗ್ರಾಮದಲ್ಲಿ ಮುರಾರ್ಜಿ ವಸತಿ ಶಾಲೆ ಸ್ಥಾಪನೆ ಮಾಡಿದ್ದು. ತಾಲೂಕಿನಲ್ಲೇ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಶೀಘ್ರದಲ್ಲಿ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗುವುದು ಎಂದರು.

ಹಳ್ಳಿ, ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಗ್ರಾಪಂ ಮಟ್ಟದಲ್ಲಿ ನವೋದಯ ಮಾದರಿ ಶಾಲೆ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ, ಹಿರಿಯೂರು ತಾಲೂಕನ್ನು ಶಿಕ್ಷಣ ಕಾಶಿಯನ್ನಾಗಿಸಲು ಶಕ್ತಿ ಮೀರಿ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ವಿದ್ಯಾರ್ಥಿಗಳು ಪಠ್ಯ ಪುಸ್ತಕಕ್ಕಷ್ಟೇ ಸೀಮಿತವಾಗಬಾರದು. ಜೀವನದಲ್ಲಿ ನೈತಿಕತೆ, ಮಾನವೀಯ ಮೌಲ್ಯ, ಪ್ರಶ್ನೀಸುವ ಮನೋಭಾವ, ನಾಯಕತ್ವ ಗುಣ ಬೆಳೆಸಿಕೊಳ್ಳಬೇಕು. ಒಳ್ಳೆಯ ನಡೆ-ನುಡಿ ಶಿಸ್ತಿನ ಜತೆಗೆ ಹೆತ್ತವರ ತ್ಯಾಗ, ಕಷ್ಟ ಅರಿತು ಜೀವನ ಸಾರ್ಥಕಗೊಳ್ಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಶ್ರಮ ಇಲ್ಲದೆ ಫಲಿತಾಂಶ ನಿರೀಕ್ಷಿಸುವುದು ಸಾಧ್ಯವಿಲ್ಲ. ಸತತ ಅಭ್ಯಾಸ, ಗುರುಗಳ ಮಾರ್ಗದರ್ಶನ, ಒಳ್ಳೆಯ ನಡೆ-ನುಡಿಗಳಿಂದ ಯಶಸ್ಸು ಸಾಧಿಸಬಹುದು ಎಂದು ಸಲಹೆ ನೀಡಿದರು.

ಪ್ರಾಚಾರ್ಯ ರಘುನಾಥ್, ಶಿಕ್ಷಕರಾದ ಏಕಾಂತ್ ರಾಜ್, ತ್ರಿವೇಣಿ, ಗುಂಡಯ್ಯ, ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಜ್ಞಾನೇಶ್, ಯಲದಕೆರೆ ಮಂಜುನಾಥ್, ಜಗದೀಶ್, ಅಶೋಕ್, ಕಲ್ಲಹಟ್ಟಿ ಹರೀಶ್, ಟಿ.ಚಂದ್ರಶೇಖರ್, ಕೃಷ್ಣಮೂರ್ತಿ, ಗುರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net