ಶೇಂಗಾ ಬಿತ್ತನೆ ಬೀಜ ಕೊರತೆ ಆಗದಿರಲಿ

dr nt srinivas mla kudlagi
Published on

ಕಾನಹೊಸಹಳ್ಳಿ: ಕಳೆದ ವರ್ಷ ಮಳೆ ಕೊರತೆಯಿಂದ ರೈತರು ನಷ್ಟಹೊಂದಿದ್ದು, ಅವ ಬಳಿ ಬಿತ್ತನೆ ಬೀಜ ಇಲ್ಲವಾಗಿದೆ. ಗುಡೇಕೋಟೆ, ಕಾನಹೊಸಹಳ್ಳಿ ಹೋಬಳಿಯಲ್ಲಿ ಹೆಚ್ಚಾಗಿ ಶೇಂಗಾ ಬಿತ್ತನೆ ಮಾಡುತ್ತಿದ್ದು, ರೈತರಿಗೆ ಬಿತ್ತನೆ ಬೀಜ ಕೊರತೆ ಆಗದಂತೆ ಮುಂಜಾಗೃತಿ ವಹಿಸಬೇಕೆಂದು ಕೃಷಿ ಅಧಿಕಾರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚಿಸಿದರು.

ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ ಸೋಮವಾರ ರೈತರಿಗೆ ಸಬ್ಸಿಡಿ ದರದಲ್ಲಿ ಶೇಂಗಾ ಬೀಜ ವಿತರಿಸಿ ಮಾತನಾಡಿದರು. ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಸ್ವಲ್ಪ ಖುಷಿಯಾಗಿದ್ದಾರೆ. ಈಗಾಗಲೇ ಕೃಷಿ ಕಾಯಕದಲ್ಲಿ ನಿರತರಾಗಿದ್ದಾರೆ. ಅವರಿಗೆ ಅಗತ್ಯವಾದ ಬಿತ್ತನೆ ಬೀಜ, ಗೊಬ್ಬರವನ್ನು ಅಧಿಕಾರಿಗಳು ಸಮರ್ಪಕವಾಗಿ ಪೂರೈಸಬೇಕು ಎಂದು ತಿಳಿಸಿದರು.

ರೈತರು ಬೆಳೆ ವಿಮೆ ಪಾವತಿಸುವುದನ್ನು ಮರೆಯಬಾರದು. ಕೆಲ ರೈತರು ಬೆಳೆ ವಿಮೆ ಮಾಡಿಸಿದ್ದರೂ ನಮಗೆ ವಿಮೆ ಹಣ ಬಂದಿಲ್ಲ. ಕೃಷಿ ಅಧಿಕಾರಿಗಳು ಬೆಳೆ ಸಮೀಕ್ಷೆ ವೇಳೆ ಆಗಿರುವ ಎಡವಟ್ಟಿನಿಂದ ಸಮಸ್ಯೆಯಾಗಿದೆ ಎಂದು ರೈತರು ದೂರಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಮರು ಪರಿಶೀಲನೆ ಮಾಡಿ ರೈತರಿಗೆ ವಿಮೆ ತಲುಪಲು ಕ್ರಮಕೈಗೊಳ್ಳುವಂತೆ ತಾಲೂಕು ಕೃಷಿ ಅಧಿಕಾರಿ ಸುನೀಲ್ ಕುಮಾರ್‌ಗೆ ಸೂಚಿಸಿದರು.

ಕೃಷಿ ಅಧಿಕಾರಿ ಸುನೀಲ್ ಕುಮಾರ್ ಮಾತನಾಡಿ, ಕಳೆದ ವರ್ಷ ಬೆಳೆ ವಿಮೆ ಮಾಡಿಸಿದ ಬಹುತೇಕ ರೈತರಿಗೆ ಹಣ ತಲುಪಿದೆ. ತಾಲೂಕಿಗೆ 6.19 ಕೋಟಿ ವಿಮೆ ಹಣ ಬಂದಿದೆ.ತಾಂತ್ರಿಕ ಕಾರಣದಿಂದ ಕೆಲ ರೈತರಿಗೆ ಪಾವತಿ ಅಗಿಲ್ಲ. ಪರಿಶೀಲನೆ ಮಾಡುವುದಾಗಿ ತಿಳಿಸಿದರು. ಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್, ತಾಲೂಕು ಕೃಷಿಕ ಸಮಾಜ ನಿರ್ದೇಶಕ ಬಣವಿಕಲ್ಲು ಎರ‌್ರಿಸ್ವಾಮಿ, ಕುರಿಹಟ್ಟಿ ಬೋಸಯ್ಯ, ಕಕ್ಕುಪಿ ಬಸವರಾಜ್, ಎಳನೀರು ಗಂಗಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net