

ತುಮಕೂರು: ಸರ್ಕಾರಿ ಕಾಮಗಾರಿಗಳಲ್ಲಿ ಬಿಲ್ ಪಡೆಯಲು ಶೇ.40 ಕಮಿಷನ್ ನೀಡಬೇಕೆಂದು ರಾಜ್ಯ ಮಟ್ಟದಲ್ಲಿ ಗುತ್ತಿಗೆದಾರರು ಮಾಡುತ್ತಿರುವ ಆರೋಪ ತುಮಕೂರಿನಲ್ಲಿಯೂ ಕೇಳಿಬಂದಿದೆ.
ನಗರದ ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿರುವ ಜಿಲ್ಲಾ ಗುತ್ತಿಗೆದಾರರ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಮಂಡಳಿಯಲ್ಲಿ ಮಂಗಳವಾರ ದಿಢೀರ್ ಸಭೆ ನಡೆಸಿದ ಗುತ್ತಿಗೆದಾರರು, ಜಿಲ್ಲೆಯಲ್ಲಿ ಕಾಮಗಾರಿ ನಡೆಸುವ ಗುತ್ತಿಗೆದಾರರಿಗೆ ಇಂಜಿನಿಯರ್‌ಗಳು, ಜನಪ್ರತಿನಿಧಿಗಳು ನೀಡುತ್ತಿರುವ ಕಿರುಕುಳದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಸಭೆಯಲ್ಲಿ ಮಾತನಾಡಿದ ತುಮಕೂರು ತಾಲೂಕು ಗುತ್ತಿಗೆದಾರ ಸಂಘದ ಅಧ್ಯಕ್ಷ ವೈ.ಆರ್.ವೇಣುಗೋಪಾಲ್, ಜನಪ್ರತಿನಿಧಿಗಳು, ರಾಜಕಾರಣಿಗಳು, ಟೆಂಡರ್ ಕಾಮಗಾರಿಗಳಲ್ಲಿ ಶಾಮೀಲಾಗಿರುವ ಕಾರಣಕ್ಕೆ ವೃತ್ತಿಪರ ಗುತ್ತಿದಾರರು ಸಮಸ್ಯೆಗೆ ಸಿಲುಕಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆಲವೇ ಕೆಲವು ಜನರಿಗೆ ನಿಯಮಬಾಹಿರವಾಗಿ ಟೆಂಡರ್ ಮೂಲಕ ಕಾಮಗಾರಿ ನೀಡಲಾಗುತ್ತಿದೆ, ಜನಪ್ರತಿನಿಧಿಗಳು ಅಧಿಕಾರಿಗಳಿಗೆ ತಾಕೀತು ಮಾಡುತ್ತಿದ್ದು, ನಿಯಮಗಳನ್ನು ಉಲ್ಲಂಘಿಸಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದರೂ ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.
ಲೋಕೋಪಯೋಗಿ ಇಲಾಖೆ ತುಮಕೂರು ವಿಭಾಗದಲ್ಲಿ ನಡೆದಿರುವ ಕಾಮಗಾರಿ ಮತ್ತು ಟೆಂಡರ್‌ಗಳ ಬಗ್ಗೆ ಲೋಕಾಯುಕ್ತ ತನಿಖೆ ನಡೆಸುತ್ತಿದ್ದು, ರಾಜಕಾರಣಿಗಳು ತಪ್ಪಿಗೆ ಸಿಕ್ಕಿಕೊಳ್ಳುವುದಿಲ್ಲ, ಅವರ ಮಾತಿಗೆ ಮನ್ನಣೆ ನೀಡಿ ಅಧಿಕಾರಿಗಳು ಜೈಲಿಗೆ ಹೋಗುತ್ತಿದ್ದಾರೆ, ಭ್ರಷ್ಟಾಚಾರಕ್ಕೆ ಜನಪ್ರತಿನಿಧಿಗಳೇ ಕುಮ್ಮಕ್ಕು ನೀಡುತ್ತಿರುವುದರಿಂದ ಶೇ.40ಕ್ಕೆ ಹೋಗಿದೆ ಎಂದರು.
ಸ್ಮಾರ್ಟ್‌ಸಿಟಿ ಕಾಮಗಾರಿಗಳಲ್ಲೂ ಸ್ಥಳೀಯರಿಗೆ ಅವಕಾಶ ನೀಡಲಿಲ್ಲ, ಜನಪ್ರತಿನಿಧಿಗಳನ್ನು ಕೇಳಿದರೆ ನಮ್ಮ ನೆರವಿಗೆ ಬರಲಿಲ್ಲ, ಬೇರೆಯವರ ಅಡಿಯಲ್ಲಿ ನೋಂದಾಯಿತ ಗುತ್ತಿಗೆದಾರರು ಉಪ ಗುತ್ತಿಗೆ ಪಡೆದು ಕೆಲಸ ಮಾಡಿಕೊಂಡು ಜೀವನ ನಡೆಸಬೇಕಿದೆ, ಉತ್ತಮ ಕೆಲಸಕ್ಕೆ ಅವಕಾಶ ನೀಡಲಿಲ್ಲ, ಗುತ್ತಿಗೆದಾರರು ಒಗ್ಗಟ್ಟಾದರೆ ಕೆಲಸ ಮಾಡಲು ಸಾಧ್ಯ ಎಂದರು.
ಅಧಿಕಾರಿಗಳ ಮೇಲೆ, ರಾಜಕಾರಣಿಗಳು ಒತ್ತಡ ಹಾಕುತ್ತಿದ್ದಾರೆ, ಹೋರಾಟ ಮತ್ತು ಸಂಘಟನೆ ಮಾಡದೇ ಹೋದರೆ ಗುತ್ತಿಗೆದಾರರ ವೃತ್ತಿ ನಿರ್ವಹಿಸಲು ಸಾಧ್ಯವಿಲ್ಲ, ಶೇ.40 ಕಮಿಷನ್‌ಗೆ ಪರಿಹಾರ ಸಿಗದೇ ಇದ್ದರೆ ಕುಟುಂಬದೊಂದಿಗೆ ಪ್ರತಿಭಟನೆಗೆ ನಡೆಸಬೇಕಿರುವುದು ಅನಿವಾರ್ಯ, ಜಿಲ್ಲೆಯಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಬೇಕು ಎಂದರು.
ಗುತ್ತಿಗೆದಾರ ವೆಂಕಟಗಿರಿಯಪ್ಪ ಮಾತನಾಡಿ, ಬೇಕಾದವರಿಗೆ ಟೆಂಡರ್ ನೀಡಲು ಬೇಕಾಬಿಟ್ಟಿ ನಿಯಮ ರೂಪಿಸಲಾಗುತ್ತಿದೆ, ಲೈನ್ ಆಫ್ ಕ್ರೆಡಿಟ್ ತೆಗೆಯಬೇಕು, ಸಿಮಿಲರ್ ನೇಚರ್ ಆಫ್ ವರ್ಕ್ ಎನ್ನುವುದು ಮೂರ್ಖತನ, ಒಂದು ಬಾರಿ ಕಾಮಗಾರಿ ನಿರ್ವಹಿಸಿದ ಅನುಭವ ಮುಂದಿನ ವರ್ಷಕ್ಕೆ ನೆರವಿಗೆ ಬರುವುದಿಲ್ಲ ಎನ್ನುವಂತಹ ಅವೈಜ್ಞಾನಿಕ ನಿಯಮ ಜಾರಿಗೆ ತಂದು ಬದಲಾಗಬೇಕು ಎಂದರು. ಟೆಂಡರ್ ಪ್ರಕ್ರಿಯೆಯಲ್ಲಿ ಆಯಾ ಶಾಸಕರು, ಸಂಸದರ ಮಧ್ಯ ಪ್ರವೇಶ ನಿಲ್ಲಬೇಕು, ದೌರ್ಜನ್ಯಯುತವಾಗಿ ಟೆಂಡರ್ ಅಂತಿಮ ಪದ್ಧತಿ ಕೊನೆಗಾಣಿಸಬೇಕು, ಶ್ರೇಣಿಕೃತವಾಗಿ ಅನುದಾನ ನೀಡಬೇಕು ಹಾಗೂ ಸಾವನ್ನಪ್ಪಿದ ಗುತ್ತಿಗೆದಾರರಿಗೆ ನೀಡುತ್ತಿದ್ದ ಸಿಬಿಎಫ್ ಅನುದಾನ ಶೀಘ್ರ ಬಿಡುಗಡೆ ಮಾಡಬೇಕು ಎಂದರು.
ಕಷ್ಟಪಟ್ಟು ಸರ್ಕಾರಿ ಕಾಮಗಾರಿ ಪೂರ್ಣಗೊಳಿಸುವ ಗುತ್ತಿಗೆದಾರರು ಬಿಲ್ ಪಡೆಯಲು ಶೇ.40 ಕಮಿಷನ್ ನೀಡಬೇಕಿರುವುದು ಸತ್ಯ. ಇಂಜಿನಿಯರ್‌ಗಳು, ಅಧಿಕಾರಸ್ಥರನ್ನು ಸಾಕಲು ನಾವು ದುಡಿಯುವಂತಾಗಿದೆ. ಹೀಗೇ ಮುಂದುವರಿದರೆ ನೂರಾರು ಗುತ್ತಿಗೆದಾರರು ಬೀದಿಗೆ ಬೀಳಲಿದ್ದಾರೆ. ವೆಂಕಟಗಿರಿಯಪ್ಪ, ಗುತ್ತಿಗೆದಾರ
ತಿನ್ನೋ ಅನ್ನಕ್ಕೆ ಮಣ್ಣು ಹಾಕಿದರು: ಶಾಸಕ, ಸಂಸದರ ಸಂಬಂಧಿಕರು, ನಿವೃತ್ತ ಇಂಜಿನಿಯರ್, ಸೂಪರಿಂಟೆಡೆಂಟ್ ಇಂಜಿನಿಯರ್ ಮಕ್ಕಳು ಬೇನಾಮಿ ಹೆಸರಿನಲ್ಲಿ ಗುತ್ತಿಗೆ ಪಡೆದು ಕಪ್ಪುಹಣವನ್ನು ವೈಟ್‌ಮನಿ ಮಾಡಿಕೊಳ್ಳುವುದಕ್ಕೆ ಶೇ.35 ಕಡಿಮೆ ಬಿಡ್‌ಗೆ ಕಾಮಗಾರಿ ಮಾಡುತ್ತಿದ್ದಾರೆ, ಜನಪ್ರತಿನಿಧಿಗಳೂ ಇಂತಹವರಿಗೆ ನೆರವಾಗಿದ್ದಾರೆ, ಲೋಕಾಯುಕ್ತ, ಎಸಿಬಿ ಸಂಸ್ಥೆಗಳು ನಿವೃತ್ತ ಅಧಿಕಾರಿಗಳ ಮೇಲೆಯೂ ನಿಗಾವಹಿಸಬೇಕು, ಅಂತಹ ಗುತ್ತಿಗೆದಾರರನ್ನು ಕಚೇರಿಗೆ ಬಿಟ್ಟುಕೊಳ್ಳಬಾರದು ಎಂದು ಗುತ್ತಿಗೆದಾರರು ಆಗ್ರಹಿಸಿದರು.