ಶೇ.20ಕ್ಕೆ ಜಿಗಿದ ಜಿಡಿಪಿ; ಕರೊನಾತಂಕದ ನಡುವೆಯೂ ಆರ್ಥಿಕತೆ ಪುನಶ್ಚೇತನದ ಸುಳಿವು

GDP
Published on

ನವದೆಹಲಿ: ಕೋವಿಡ್ ಸಾಂಕ್ರಾಮಿಕತೆಯ ಎರಡನೇ ಅಲೆಯ ವಿನಾಶಕಾರಿ ಹೊಡೆತದ ಹೊರತಾಗಿಯೂ ಪ್ರಸಕ್ತ 2021-22ರ ಹಣಕಾಸು ವರ್ಷದ ಏಪ್ರಿಲ್-ಜೂನ್ ಅವಧಿಯ ಮೊದಲ ತ್ರೖೆಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಶೇಕಡ 20.1ಕ್ಕೆ ಜಿಗಿದಿದೆ. ಇದರೊಂದಿಗೆ ಆರ್ಥಿಕತೆ ಪುನಶ್ಚೇತನದ ಆಶಾಕಿರಣ ಮೂಡಿದೆ.

2020-21ರ ಹಣಕಾಸು ವರ್ಷದ ಇದೇ ಅವಧಿಯಲ್ಲಿ ಜಿಡಿಪಿ -24.4%ಕ್ಕೆ ಕುಸಿದಿತ್ತೆಂದು ರಾಷ್ಟ್ರೀಯ ಅಂಕಿಸಂಖ್ಯೆ ಕಚೇರಿ (ಎನ್​ಎಸ್​ಒ) ಮಂಗಳವಾರ ಬಿಡುಗಡೆ ಮಾಡಿದ ಡೇಟಾ ತಿಳಿಸಿದೆ. ಕರೊನಾ ಸಾಂಕ್ರಾಮಿಕತೆ ದಾಂಗುಡಿಯಿಟ್ಟಿದ್ದರಿಂದ ಸರ್ಕಾರ ಕಳೆದ ವರ್ಷ ಮಾರ್ಚ್​ನಲ್ಲಿ ದೇಶವ್ಯಾಪಿ ಲಾಕ್​ಡೌನ್ ವಿಧಿಸಿತ್ತು. ಈ ವರ್ಷ ಏಪ್ರಿಲ್ ಮಧ್ಯ ಭಾಗದಲ್ಲಿ ಸೋಂಕಿನ ಎರಡನೇ ಅಲೆ ದೇಶವನ್ನು ಅಪ್ಪಳಿಸಿದ್ದರಿಂದ ಅನೇಕ ರಾಜ್ಯಗಳು ಲಾಕ್​ಡೌನ್ ಸಹಿತ ಕಠಿಣ ನಿರ್ಬಂಧಗಳನ್ನು ಜಾರಿಗೊಳಿಸಿದ್ದವು. ಆದರೂ ಆರ್ಥಿಕತೆ ಚೇತರಿಕೆ ದಾಖಲಿಸಿದೆ. ರಾಷ್ಟ್ರವ್ಯಾಪಿ ಲಾಕ್​ಡೌನ್ ವೇಳೆ ಕಳೆದ ವರ್ಷ ಏಪ್ರಿಲ್-ಜೂನ್​ನಲ್ಲಿ ಜಿಡಿಪಿ 26,95,421 ಕೋಟಿ ರೂಪಾಯಿಗೆ ಕುಗ್ಗಿತ್ತು. 2011-12ರ ಕಾನ್​ಸ್ಟಂಟ್ ಬೆಲೆಗಳ ಆಧಾರದಲ್ಲಿ 2021-22ರ ಏಪ್ರಿಲ್-ಜೂನ್ ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ಮೊತ್ತ 32,38,020 ಕೋಟಿ ರೂಪಾಯಿ ಎಂದು ಅಂದಾಜು ಮಾಡಲಾಗಿದ್ದು ಶೇಕಡ 20.1 ಏರಿಕೆಯಾಗಿದೆ ಎಂದು ಎನ್​ಎಸ್​ಒ ವಿವರಿಸಿದೆ. 2019-20ರ ಇದೇ ತ್ರೖೆಮಾಸಿಕದಲ್ಲಿ ಜಿಡಿಪಿ ಮೊತ್ತ 35,66,708 ಕೋಟಿ ರೂಪಾಯಿ ಆಗಿತ್ತು.

ಸೋಂಕಿನ ನಿಯಂತ್ರಣಕ್ಕಾಗಿ 2021-22ರ ಪ್ರಥಮ ತ್ರೖೆಮಾಸಿಕದಲ್ಲಿ ಸ್ಥಳೀಯ ನಿಯಂತ್ರಣಗಳನ್ನು ಹೇರಲಾಗಿತ್ತು. ಅವಶ್ಯಕವಲ್ಲ ಎಂದು ಪರಿಗಣಿಸಲಾದ ಆರ್ಥಿಕ ಚಟುವಟಿಕೆಗಳನ್ನು ನಿರ್ಬಂಧಿಸಲಾಗಿತ್ತು. ಜನರ ಓಡಾಟವನ್ನೂ ನಿಯಂತ್ರಿಸಲಾಗಿತ್ತು ಎಂದು ಅದು ವಿವರಿಸಿದೆ. ಕೋವಿಡ್ ಸಾಂಕ್ರಾಮಿಕತೆಯಿಂದಾಗಿ ಆರ್ಥಿಕ ಚಟುವಟಿಕೆಗಳು ಮತ್ತು ಡೇಟಾ ಸಂಗ್ರಹ ವ್ಯವಸ್ಥೆ ಮೇಲೆ ಬೀರಿದ ಪರಿಣಾಮವು ತ್ರೖೆಮಾಸಿಕ ಜಿಡಿಪಿ ಅಂದಾಜಿನ ಮೇಲೆಯೂ ಪರಿಣಾಮ ಬೀರಿದೆ ಎಂದೂ ಎನ್​ಎಸ್​ಒ ವಿವರಿಸಿದೆ.

ಮೂಲ ಕ್ಷೇತ್ರದಲ್ಲಿ ಶೇ. 9.4 ಬೆಳವಣಿಗೆ: ಎಂಟು ಮೂಲ ವಲಯಗಳು (ಕೋರ್ ಸೆಕ್ಟರ್) ಕಳೆದ ವರ್ಷದ ಜುಲೈ ತಿಂಗಳಿಗೆ ಹೋಲಿಸಿದರೆ ಈ ವರ್ಷ ಜುಲೈನಲ್ಲಿ ಶೇಕಡ 9.4ಕ್ಕೆ ಏರಿಕೆಯಾಗಿದೆ. ಎರಡನೇ ಅಲೆಯ ವೇಳೆ ಹೇರಿದ್ದ ನಿಯಂತ್ರಣಗಳ ಸಡಿಲಿಕೆ ಹಾಗೂ ಬೇಡಿಕೆಯಲ್ಲಿ ಪುನಶ್ಚೇತನದಿಂದಾಗಿ ಎಂಟರ ಪೈಕಿ ಏಳು ವಲಯಗಳು ಧನಾತ್ಮಕ ಬೆಳವಣಿಗೆ ದಾಖಲಿಸಿವೆ.

ಉತ್ಪಾದನಾ ವಲಯ ವೃದ್ಧಿ: ಉತ್ಪಾದನಾ ವಲಯದ ಒಟ್ಟು ಮೌಲ್ಯವರ್ಧಿತ (ಜಿವಿಎ) ಬೆಳವಣಿಗೆ ಕೂಡ 2021-22ರ ಮೊದಲ ತ್ರೖೆಮಾಸಿಕದಲ್ಲಿ ಶೇಕಡ 49.6ರಷ್ಟು ಏರಿಕೆಯಾಗಿದೆ. ವರ್ಷದ ಹಿಂದೆ ಅದು ಶೇಕಡ 36ಕ್ಕೆ ಕುಗ್ಗಿತ್ತು. ಕೃಷಿ ವಲಯದ ಜಿವಿಎ ಕಳೆದ ವರ್ಷದ ಶೇ. 3.5ಕ್ಕೆ ಹೋಲಿಸಿದರೆ ಈ ವರ್ಷ ಶೇ. 4.5ಕ್ಕೆ ಏರಿದೆ. ನಿರ್ಮಾಣ ವಲಯದ ಜಿವಿಎ ಶೇ. 68.3 ಹಾಗೂ ಗಣಿಗಾರಿಕೆ ವಲಯದ ಜಿವಿಎ ಶೇ.18.6 ಆಗಿದೆ. ವಿದ್ಯುತ್, ಅನಿಲ, ನೀರು ಸರಬರಾಜು, ಮತ್ತಿತರ ಬಳಕೆದಾರರ ಸೇವಾವಲಯದ ಜಿವಿಎ ಕೂಡ ಬೆಳವಣಿಗೆ ದಾಖಲಿಸಿದೆ. ವಾಣಿಜ್ಯ, ಹೋಟೆಲ್, ಸಾರಿಗೆ, ಸಂಪರ್ಕ ವಲಯಗಳಲ್ಲಿ ಕೂಡ ಧನಾತ್ಮಕ ಬೆಳವಣಿಗೆಯಾಗಿದೆ. ಹಣಕಾಸು, ರಿಯಲ್ ಎಸ್ಟೇಟ್ ಮತ್ತು ವೃತ್ತಿಪರ ಸೇವಾ ಕ್ಷೇತ್ರದಲ್ಲಿ 3.7% ಬೆಳವಣಿಗೆಯಾಗಿದೆ.

ಇನ್ನಷ್ಟು ವೇಗ, ಮೂಡಿಸ್ ಆಶಾಭಾವ: ಕೋವಿಡ್ ನಿರ್ಬಂಧಗಳನ್ನು ನಿಧಾನಕ್ಕೆ ತೆಗೆಯುತ್ತಿರುವುದರಿಂದ ದೇಶದ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿವೆ ಎಂದು ‘ಮೂಡಿಸ್’ ಮಂಗಳವಾರ ಅಭಿಪ್ರಾಯ ಪಟ್ಟಿದೆ. ಜಗತ್ತಿನಾದ್ಯಂತವೂ ಆರ್ಥಿಕ ಚಟುವಟಿಕೆಗಳು ಪುನರಾರಂಭವಾಗುತ್ತಿರುವುದರಿಂದ ಈ ಬೆಳವಣಿಗೆ ಪ್ರಕ್ರಿಯೆ ಇನ್ನಷ್ಟು ವೇಗ ಪಡೆದುಕೊಳ್ಳಬಹುದು ಎಂದು ಹೇಳಿದೆ.

ಆರ್ಥಿಕತೆಯ ಪುನಶ್ಚೇತನದ ಸೂಚನೆ ಕಂಡುಬಂದಿದೆ. ಮುಂದಿನ ಮೂರು ತ್ರೖೆಮಾಸಿಕಗಳಲ್ಲೂ ಜಿಡಿಪಿ ಇದೇ ಬೆಳವಣಿಗೆ ಯನ್ನು ಕಾಯ್ದುಕೊಳ್ಳುವ ನಿರೀಕ್ಷೆಯಿದೆ. | ನಿರ್ಮಲಾ ಸೀತಾರಾಮನ್ ಕೇಂದ್ರ ವಿತ್ತ ಸಚಿವೆ

ಷೇರುಪೇಟೆ ಸಾರ್ವಕಾಲಿಕ ಜಿಗಿತ

ಮುಂಬೈ: ಭಾರತೀಯ ಷೇರುಪೇಟೆ ಮಂಗಳವಾರ ಸಾರ್ವಕಾಲಿಕ ದಾಖಲೆ ಬರೆದಿದೆ. ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (ಬಿಎಸ್​ಇ) 57 ಸಾವಿರದ ಗಡಿ ದಾಟಿದ್ದರೆ, ರಾಷ್ಟ್ರೀಯ ಷೇರುಪೇಟೆ 17 ಸಾವಿರ ಮೀರಿ ಮುನ್ನಡೆದಿದೆ. ಇದರಿಂದ ಹೂಡಿಕೆದಾರರ ಸಂಪತ್ತು 250 ಲಕ್ಷ ಕೋಟಿ ರೂಪಾಯಿ ವೃದ್ಧಿಸಿದೆ. ಬಿಎಸ್​ಇ ಲಿಸ್ಟೇಡ್ ಕಂಪನಿಗಳ ಮಾರುಕಟ್ಟೆ ಬಂಡವಾಳ 2,50,02,084 ಕೋಟಿ ರೂಪಾಯಿಗೆ ಹೆಚ್ಚಳ ಕಂಡಿದೆ. 30 ಪ್ರಮುಖ ವಲಯದ ಸೆನ್ಸೆಕ್ಸ್ ಸಂವೇದಿಯಲ್ಲಿ 662.63 (ಶೇ. 1.16) ಅಂಶ ಏರಿಕೆ ಆಗಿದ್ದು, ದಿನ ಅಂತ್ಯಕ್ಕೆ 57,552.39 ವಹಿವಾಟು ಮುಗಿದಿದೆ. ಮಧ್ಯಂತರ ವಹಿವಾಟಿನಲ್ಲಿ 57,625.26ರವರೆಗೂ ಏರಿಕೆ ಕಂಡಿತ್ತು. ಆಗಸ್ಟ್​ನಲ್ಲಿ ಬಿಎಸ್​ಇ 4 ಸಾವಿರ ಪಾಯಿಂಟ್ ಏರಿಕೆ ದಾಖಲಿಸಿದೆ.

ರಾಷ್ಟ್ರೀಯ ಷೇರುಪೇಟೆ ನಿಫ್ಟಿಯಲ್ಲಿ 201.15 ಅಂಶ (ಶೇ.1.19) ಹೆಚ್ಚಳವಾಗಿದ್ದು, 17,132,20ಕ್ಕೆ ವಹಿವಾಟು ಮುಗಿದಿದೆ. ಮಧ್ಯಂತರದಲ್ಲಿ 17,153.50ರವರೆಗೂ ಏರಿಕೆ ದಾಖಲಿಸಿತ್ತು. ಜಾಗತಿಕ ಷೇರುಪೇಟೆಯಲ್ಲಿನ ಸಂಚಲನ, 2021-22ರ ಮೊದಲ ತ್ರೖೆಮಾಸಿಕದಲ್ಲಿ ಜಿಡಿಪಿ ಶೇ. 20ರಷ್ಟು ವೃದ್ಧಿಸಿರುವುದು, ದೇಶೀಯ ಮಾರುಕಟ್ಟೆಯಲ್ಲಿನ ಷೇರು ಖರೀದಿಯ ಭರಾಟೆಯು ಷೇರುಪೇಟೆಯಲ್ಲಿ ಗೂಳಿ ನಾಗಾಲೋಟದಲ್ಲಿ ಮುನ್ನುಗ್ಗಲು ಕಾರಣ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಭಾರ್ತಿ ಏರ್​ಟೆಲ್ (ಶೇ.6.99) ಲಾಭ ದಾಖಲಿಸಿದ್ದು, ಬಜಾಜ್ ಫೈನಾನ್ಸ್, ಬಜಾಜ್ ಫಿನ್​ಸರ್ವ್, ಏಷ್ಯನ್ ಪೇಂಟ್ಸ್, ಟೈಟಾನ್, ಟಿಸಿಎಸ್, ಟೆಕ್ ಮಹೀಂದ್ರಾ ಷೇರು ಶೇ. 4.94ರಷ್ಟು ವೃದ್ಧಿ ಕಂಡಿವೆ. ಇನ್ನೊಂದೆಡೆ ನೆಸ್ಲೆ ಇಂಡಿಯಾ, ಇಂಡಸ್​ಇಂಡ್ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್​ಗಳಿಗೆ ನಷ್ಟವಾಗಿದೆ.

ಚಿನ್ನದ ಧಾರಣೆ ಇಳಿಕೆ: ದೆಹಲಿ ಚಿನಿವಾರಪೇಟೆಯಲ್ಲಿ ಚಿನ್ನದ ದರ 100 ರೂ. ತಗ್ಗಿದ್ದು, 10 ಗ್ರಾಂ ಅಪರಂಜಿ ಚಿನ್ನದ ದರ 46,272 ರೂ. ಆಗಿದೆ. ಬೆಳ್ಳಿ ಬೆಲೆ 134 ರೂ. ಕಡಿಮೆ ಆಗಿದ್ದು, ಕೆ.ಜಿ.ಧಾರಣೆ 62,639 ರೂ.ಗೆ ತಗ್ಗಿದೆ. ವಿದೇಶಿ ವಿನಿಮಯದಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ 29 ಪೈಸೆ ಏರಿಕೆ ಕಂಡಿದ್ದು, ಪ್ರತಿ ಡಾಲರ್​ಗೆ 73 ರೂಪಾಯಿಗೆ ಸ್ಥಿರವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net