

ಶೃಂಗೇರಿ: ಕರ್ಣಾಟಕ ಬ್ಯಾಂಕ್ ಅಧ್ಯಕ್ಷ ಪಿ.ಪ್ರದೀಪ್‌ಕುಮಾರ್ ಹಾಗೂ ಸಿಇಒ ರಾಘವೇಂದ್ರ ಎಸ್. ಭಟ್ ಅವರು ಸೋಮವಾರ ಗುರುನಿವಾಸದಲ್ಲಿ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.
ಬ್ಯಾಂಕ್‌ನ ಸಿಇಒ ರಾಘವೇಂದ್ರ ಎಸ್. ಭಟ್ ಮಾತನಾಡಿ, ದೇಶಾದ್ಯಂತ 965 ಬ್ಯಾಂಕ್ ಶಾಖೆಗಳು, 1600ಕ್ಕೂ ಹೆಚ್ಚು ಎಟಿಎಂಗಳಿದ್ದು ವಾರ್ಷಿಕ ವ್ಯವಹಾರವು 1 ಲಕ್ಷದ 77 ಸಾವಿರ ಕೋಟಿ ರೂ. ದಾಟಿದೆ. ವರ್ಷದಿಂದ ವರ್ಷಕ್ಕೆ ಉತ್ತಮ ಲಾಭ ಗಳಿಸುತ್ತಿದ್ದು 9000ಕ್ಕೂ ಮೇಲ್ಪಟ್ಟು ಸಿಬ್ಬಂದಿ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. 102 ವರ್ಷಗಳ ಇತಿಹಾಸ ಹೊಂದಿರುವ ಬ್ಯಾಂಕ್ ವ್ಯವಹಾರ ಹಾಗೂ ಹೆಚ್ಚಿನ ಲಾಭದ ಗುರಿ ಹೊಂದಿದ್ದು ಭವಿಷ್ಯದಲ್ಲಿ ಬ್ಯಾಂಕ್ ಅಭಿವೃದ್ಧಿಗೆ ಉಭಯ ಶ್ರೀಗಳ ಅನುಗ್ರಹ ಬಲು ಮುಖ್ಯ ಎಂದು ಯತಿವರ್ಯರಲ್ಲಿ ವಿನಂತಿಸಿದರು.
ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಮಾತನಾಡಿ, ಸ್ಥಳೀಯ ಶಾರದಾ ಬ್ಯಾಂಕ್ ಅನ್ನು ವಿಲೀನಗೊಳಿಸಿಕೊಂಡು ಈ ಪ್ರಮಾಣದಲ್ಲಿ ಬೆಳೆದಿರುವ ಕರ್ಣಾಟಕ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ. ಬ್ಯಾಂಕಿನಿಂದ ಜನಸಾಮಾನ್ಯರಿಗೆ ಉತ್ತಮ ಸೇವೆ ಲಭಿಸಲಿ ಎಂದು ಅನುಗ್ರಹಿಸಿದರು.
ಶೃಂಗೇರಿ ಮಠದಿಂದ ನಡೆಸಲಾಗುತ್ತಿರುವ ಶೃಂಗೇರಿ ಜಯಭಾರತೀ ಪ್ರೌಢಶಾಲೆಗೆ ಬಸ್ ಖರೀದಿಸಲು 24.40 ಲಕ್ಷ ರೂ. ಚೆಕ್‌ನ್ನು ಬ್ಯಾಂಕ್‌ನಿಂದ ನೀಡಲಾಯಿತು.
ಶ್ರೀ ಶಾರದಾ ಪೀಠದ ಆಡಳಿತಾಧಿಕಾರಿ ಪಿ.ಮುರಳಿ, ಬ್ಯಾಂಕ್ ನಿರ್ದೇಶಕರಾದ ಬಾಲಕೃಷ್ಣ ಅಲಸೆ, ಜೀವನ್‌ದಾಸ್ ನಾರಾಯಣ್, ಶಿವಮೊಗ್ಗ ಪ್ರಾದೇಶಿಕ ವ್ಯವಸ್ಥಾಪಕ ಎಚ್.ಎ.ನಾಗರಾಜ್, ಸ್ಥಳೀಯ ಶಾಖಾ ವ್ಯವಸ್ಥಾಪಕರಾದ ಕಿರಣ್‌ಕುಮಾರ್, ನವೀನ್‌ಕುಮಾರ್ ಇದ್ದರು.