ಬೆಂಗಳೂರು: ಶುಕ್ರಗ್ರಹ ಅನ್ವೇಷಣೆಗಾಗಿ ಇಸ್ರೋ ಕೈಗೊಳ್ಳುತ್ತಿರುವ ಯೋಜನೆಯಲ್ಲಿ ಸ್ವೀಡನ್ ಕೈಜೋಡಿಸಲಿದೆ ಎಂದು ಸ್ವೀಡನ್ ರಾಯಭಾರಿ ಕ್ಲಾಸ್ ಮೊಲೀನ್ ಪ್ರಕಟಿಸಿದರು.
“ಬೆಂಗಳೂರು ತಂತ್ರಜ್ಞಾನ ಮೇಳ-2020”ದಲ್ಲಿ ಶುಕ್ರವಾರ 'ಸುಸ್ಥಿರ ಭವಿಷ್ಯಕ್ಕಾಗಿ ಸ್ವೀಡನ್-ಭಾರತ ಬಾಹ್ಯಾಕಾಶ ತಂತ್ರಜ್ಞಾನ ಸಹಯೋಗ' ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಒಟ್ಟಿಗೆ ಕೆಲಸಮಾಡುತ್ತಿರುವ ಭಾರತ ಹಾಗೂ ಸ್ವೀಡನ್ ದೇಶಗಳ ಸಹಯೋಗ ಇನ್ನಷ್ಟು ಬೆಳೆಯಲಿದೆ ಎಂದರು.
ಬಾಹ್ಯಾಕಾಶ ಕ್ಷೇತ್ರವು ಜಗತ್ತಿನಾದ್ಯಂತ ಹಲವು ದೇಶಗಳ ಅರ್ಥವ್ಯವಸ್ಥೆಗೆ ಕೊಡುಗೆ ನೀಡುತ್ತಿದೆ. ಇದು ಭಾರತದಲ್ಲೂ ಸಾಧ್ಯವಾಗುವಂತೆ ಮಾಡಲು ಕೇಂದ್ರ ಸರಕಾರವು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಖಾಸಗಿ ಸಂಸ್ಥೆಗಳು ಪೂರೈಕೆದಾರರಷ್ಟೇ ಆಗಿ ಉಳಿಯದೆ ಮುಂದಿನ ದಿನಗಳಲ್ಲಿ ಇಸ್ರೋದ ಸಹಪ್ರಯಾಣಿಕರಾಗಿಯೂ ಬೆಳೆಯಲು ಈ ಕ್ರಮಗಳು ನೆರವಾಗಲಿವೆ ಎಂದು ಇಸ್ರೋದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್‌ನ ಮುಖ್ಯಸ್ಥ ಜಿ. ನಾರಾಯಣನ್ ಹೇಳಿದರು.