ಶಿಷ್ಟಾಚಾರ ಉಲ್ಲಂಸಿದ್ರೆ ಕ್ರಮ: ಶಿಷ್ಟಾಚಾರ ಉಲ್ಲಂಸಿದ್ರೆ ಕ್ರಮ

03-11-rama-DC meeting
Published on

ರಾಮನಗರ : ಜಿಲ್ಲೆಯಲ್ಲಿ ಆಯೋಜಿಸುವ ಕಾರ್ಯಕ್ರಮಗಳಲ್ಲಿ ಸರ್ಕಾರ ಹೊರಡಿಸಿರುವ ಸುತ್ತೋಲೆ ಅನ್ವಯ ಕಡ್ಡಾಯವಾಗಿ ಶಿಷ್ಟಾಚಾರ ಪಾಲನೆಯಾಗಬೇಕು. ಶಿಷ್ಟಾಚಾರ ಉಲ್ಲಂಘನೆಯಾದರೆ ಕಾರ್ಯಕ್ರಮ ಆಯೋಜಿಸುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ. ರಾಕೇಶ್‌ಕುಮಾರ್ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರ್ಕಾರಿ ಕಾರ್ಯಕ್ರಮ ಗಳಲ್ಲಿ ಶಿಷ್ಟಾಚಾರ ಪಾಲನೆಯ ಕುರಿತು ಮಂಗಳವಾರ ಏರ್ಪಡಿಸಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಗೆ ಸಚಿವರು ಭೇಟಿ ನೀಡಿದಾಗ ಸ್ಥಳೀಯ ಶಾಸಕರಿಗೆ ಕಡ್ಡಾಯವಾಗಿ ಕಾರ್ಯಕ್ರಮದ ಮಾಹಿತಿ ನೀಡಬೇಕು. ವಾಟ್ಸ್ ಆ್ಯಪ್ ಸಂದೇಶ ಕಳಿಸುವ ಬದಲು ಲಿಖಿತವಾಗಿ ಪತ್ರ ಬರೆದು ಅವರ ಅಧಿಕೃತ ಇ-ಮೇಲ್‌ಗೆ ಕಳಿಸಬೇಕು ಎಂದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮಗಳ ಆಹ್ವಾನ ಪತ್ರ ಮುದ್ರಣಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿಯ ಶಿಷ್ಟಾಚಾರ ಶಾಖೆಯಿಂದ ಅನುಮೋದನೆ ಪಡೆದು ನಂತರ ಆಹ್ವಾನ ಪತ್ರಿಕೆಯನ್ನು ಮುದ್ರಿಸಬೇಕು.

ಆಹ್ವಾನ ಪತ್ರಿಕೆಯನ್ನು ಜನಪ್ರತಿನಿಧಿಗಳ ಅಧಿಕೃತ ವಿಳಾಸಕ್ಕೆ ತಲುಪಿಸಿ ಅವರ ಗಮನಕ್ಕೆ ಬಂದಿರುವುದನ್ನು ಖಾತ್ರಿ ಮಾಡಿಕೊಳ್ಳಬೇಕು ಎಂದರು.ತಾಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಏನೇನು ಶಿಷ್ಟಾಚಾರ ಪಾಲಿಸುವ ಬಗ್ಗೆ ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ಅದೇರೀತಿ ಅಧಿಕಾರಿಗಳು ನಡೆದುಕೊಳ್ಳಬೇಕು. ಅದನ್ನು ಹೊರತುಪಡಿಸಿ ಅಧಿಕಾರಿಗಳು ತಾವೇ ತೀರ್ಮಾನ ಕೈಗೊಳ್ಳುವಂತಿಲ್ಲ.

ಶಿಷ್ಟಾಚಾರ ಪಾಲನೆಗೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಸಮಿತಿ ಇದ್ದು, ಸಮಿತಿಯ ಸೂಚನೆ ಅನ್ವಯ 3 ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು. ಸಮಿತಿಗೆ ಜಿಲ್ಲೆಯಿಂದ ಯಾವುದೇ ದೂರುಗಳು ಹೋದಲ್ಲಿ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಟಿ. ಜವರೇಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಿರಂಜನ್, ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ಚಿಕ್ಕಸುಬ್ಬಯ್ಯ, ರಾಮನಗರ ನಗರಸಭೆ ಆಯುಕ್ತ ನಂದಕುಮಾರ್, ತಹಸೀಲ್ದಾರ್ ನಾಗೇಶ್, ವಿಶ್ವನಾಥ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net