ಶಿವಾಜಿ ಪ್ರತಿಮೆ ಕ್ರೆಡಿಟ್ ಪಾಲಿಟಿಕ್ಸ್!

600
Published on

ಬೆಳಗಾವಿ: ತಾಲೂಕಿನ ರಾಜಹಂಸಗಡ ಕೋಟೆ ಅಭಿವೃದ್ಧಿ ಹಾಗೂ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಸಂಬಂಧಿಸಿದಂತೆ ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ಕ್ರೆಡಿಟ್ ವಾರ್ ಶುರುವಾಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜಹಂಸಗಡ ಕೋಟೆ ಅಭಿವೃದ್ಧಿ ನನ್ನ ಕನಸಾಗಿತ್ತು ಎಂದು ಹೇಳುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮಾಜಿ ಶಾಸಕ ಸಂಜಯ ಪಾಟೀಲ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರು ಬಿಜೆಪಿ ಸರ್ಕಾರದಲ್ಲಿ ಕೋಟೆ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿರುವ ದಾಖಲೆಗಳನ್ನಿಟ್ಟುಕೊಂಡು ಲಕ್ಷ್ಮೀ ಹೆಬ್ಬಾಳ್ಕರ್ ಮೇಲೆ ಹರಿಹಾಯುತ್ತಿದ್ದಾರೆ. ಒಟ್ಟು ಪ್ರಹಸನ ಬಿಜೆಪಿ-ಕಾಂಗ್ರೆಸ್ ಮಧ್ಯೆ ರಾಜಕೀಯ ಪ್ರತಿಷ್ಠೆಯ ಸಮರದ ಆರಂಭದಂತೆ ಕಾಣುತ್ತಿದೆ.

50 ಅಡಿ ಎತ್ತರದ ಶಿವಾಜಿ ಮಹಾರಾಜರ ಮೂರ್ತಿ ಲೋಕಾರ್ಪಣೆಗೆ ಸಿದ್ಧಗೊಂಡಿದೆ. ಸರ್ಕಾರಿ ಕಾರ್ಯಕ್ರಮವನ್ನು ಖಾಸಗಿ ಕಾರ್ಯಕ್ರಮ ಮಾಡಲು ಲಕ್ಷ್ಮೀ ಯತ್ನಿಸಿದ್ದಾರೆ. ಚುನಾವಣೆ ಹೊಸ್ತಿಲಲ್ಲಿ ಸರ್ಕಾರಿ ಯೋಜನೆಯನ್ನು ತನ್ನದೆಂದು ಬಿಂಬಿಸಿಕೊಂಡು, ಶಿಷ್ಟಾಚಾರ ಉಲ್ಲಂಘಿಸಿ ಕಾರ್ಯಕ್ರಮ ಮಾಡಲು ಯತ್ನಿಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪ ಮಾಡಿದ್ದಾರೆ. ಶಿವಾಜಿ ಪ್ರತಿಮೆಯನ್ನು ಮಾರ್ಚ್ 5ರಂದು ಅನಾವರಣಗೊಳಿಸಲು ಶಾಸಕಿ ಲಕ್ಷ್ಮೀ ಸಿದ್ಧತೆ ನಡೆಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ 50 ಲಕ್ಷ ರೂ. ಅನುದಾನದಲ್ಲಿ ಶಿವಾಜಿ ಪ್ರತಿಮೆ ನಿರ್ಮಿಸಲಾಗಿದೆ. ಪ್ರತಿಮೆ ಪ್ರತಿಷ್ಠಾಪನೆಗೆ ಕರ್ನಾಟಕ ಹಾಗೂ ಮಹಾರಾಷ್ಟ್ರದ ಕಾಂಗ್ರೆಸ್ ಘಟಾನುಘಟಿ ನಾಯಕರು ಬರುವುದಾಗಿ ಪ್ರಕಟಿಸಲಾಗಿದೆ. ಕಾಂಗ್ರೆಸ್ ನಾಯಕರನ್ನು ಆಹ್ವಾನಿಸಿದ್ದಕ್ಕೆ ಮಾಜಿ ಸಚಿವ ರಮೇಶ ಜಾರಕಿಹೊಳಿ ವಿರೋಧ ವ್ಯಕ್ತಪಡಿಸಿದ್ದು, ಸಿಎಂ ಬಸವರಾಜ ಬೊಮ್ಮಾಯಿ, ಸಚಿವ ಗೋವಿಂದ ಕಾರಜೋಳ ಅವರನ್ನು ಕರೆಯಿಸಿ ಪ್ರತಿಮೆ ಲೋಕಾರ್ಪಣೆ ಮಾಡಿಸಲು ಯೋಜನೆ ರೂಪಿಸಿದ್ದಾರೆ.

ರಾಜಹಂಸಗಡಕ್ಕೆ ಜಾರಕಿಹೊಳಿ-ಸಂಜಯ್ ಭೇಟಿ: ಬಿಜೆಪಿ ನಾಯಕರಾದ ಮಾಜಿ ಸಚಿವ ರಮೇಶ ಜಾರಕಿಹೊಳಿ, ಮಾಜಿ ಶಾಸಕ ಸಂಜಯ ಪಾಟೀಲ, ಕಿರಣ ಜಾಧವ ಅವರು ರಾಜಹಂಸಗಡಕ್ಕೆ ಶನಿವಾರ ಭೇಟಿ ಕಾಮಗಾರಿ ವೀಕ್ಷಿಸಿದರು. ಸಂಜಯ ಪಾಟೀಲ ಮಾತನಾಡಿ, ಸರ್ಕಾರಿ ಕಾರ್ಯಕ್ರಮವನ್ನು ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಕಾಂಗ್ರೆಸ್ ಕಾರ್ಯಕ್ರಮ ಮಾಡಲು ಹೊರಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಾನು 2008ರಲ್ಲಿ ಶಾಸಕನಾಗಿದ್ದಾಗ ರಾಜಹಂಸಗಡ ಅಭಿವೃದ್ಧಿಗೆ ಚಿಂತನೆ ಮಾಡುತ್ತಿದ್ದೆ. ರಾಜಹಂಸಗಡಕ್ಕೆ ಹೋಗುವುದಕ್ಕೆ ರಸ್ತೆ ಇರಲಿಲ್ಲ. 2010ರಿಂದಲೇ ರಾಜಹಂಸಗಡದ ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಅಂದೇ ಮೂರೂವರೆ ಕೋಟಿ ರೂ. ಬಿಡುಗಡೆ ಮಾಡಿಸಿದ್ದೆವು. ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೂ ಬಿಜೆಪಿ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದರು. ‘ರಾಜಹಂಸಗಡ ಅಭಿವೃದ್ಧಿ ನನ್ನ ಕನಸಿತ್ತು’ ಎಂದು ಈಗ ಲಕ್ಷ್ಮೀ ಹೇಳುತ್ತಿರುವುದು ಮತ ರಾಜಕಾರಣಕ್ಕಾಗಿ ಎಂದರು. ರಾಜಹಂಸಗಡದ ಅಭಿವೃದ್ಧಿ ಕಾಮಗಾರಿ ಹಾಗೂ ಶಿವಾಜಿ ಪುತ್ಥಳಿ ಉದ್ಘಾಟನೆಯು ಸರ್ಕಾರಿ ಶಿಷ್ಟಾಚಾರದಂತೆ ಮಾಡಿದರೆ ನಮ್ಮದೇನೂ ತಕರಾರು ಇಲ್ಲ ಎಂದು ಸ್ಪಷ್ಟಪಡಿಸಿದರು.

ರಮೇಶ ಜಾರಕಿಹೊಳಿ ಮಾತನಾಡಿ, 2010 ರಿಂದಲೇ ರಾಜಹಂಸಘಡ ಅಭಿವೃದ್ಧಿ ಕಾರ್ಯ ನಡೆದಿವೆ. ನಾನು ನೀರಾವರಿ ಸಚಿವನಾಗಿದ್ದಾಗ ಸಿ.ಟಿ ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದರು. ಹಣ ಬಿಡುಗಡೆ ವಿಚಾರ ಕ್ಯಾಬಿನೆಟ್‌ನಲ್ಲೂ ಚರ್ಚೆ ಆಯಿತು. ಯಾವುದೇ ಪಕ್ಷ ಇರಲಿ ಅಭಿವೃದ್ಧಿ ಮುಖ್ಯ ಎಂದು ನಾನು ಅಂದಿನ ಸಭೆಯಲ್ಲಿ ಹೇಳಿದ್ದೆ. ಆ ಸಂದರ್ಭದಲ್ಲೇ 3.5 ಕೋಟಿ ರೂ. ಬಿಡುಗಡೆಯಾಗಿತ್ತು. ಡಿಕೆಶಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದಾಗ 50 ಲಕ್ಷ ಅನುದಾನ ನೀಡಿದ್ದಾರೆಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ. ದಾಖಲೆ ಇದ್ದರೆ ತೋರಿಸಲಿ ಎಂದು ಸವಾಲು ಹಾಕಿದರು.

ರಾಜಹಂಸಗಡ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ 4 ಕೋಟಿ ರೂ. ಬಿಡುಗಡೆಯಾಗಿದೆ. ಶಾಸಕಿ ಹೆಬ್ಬಾಳ್ಕರ್ ಅವರು 1 ಕೋಟಿ ರೂ. ನೀಡಿದ್ದಾರೆ. ಜನರ ಕನಸಿನಂತೆ ರಾಜಹಂಸಗಡದಲ್ಲಿ ಶಿವಾಜಿ ಪುತ್ಥಳಿ ನಿರ್ಮಾಣವಾಗಿ ಉದ್ಘಾಟನೆಯಾಗುತ್ತಿದೆ. ಆದರೆ, ರಮೇಶ ಜಾರಕಿಹೊಳಿಗೆ ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೇನು ಸಂಬಂಧ? ಜಿಲ್ಲಾಡಳಿತದಿಂದ ಇನ್ನೂ ಆಮಂತ್ರಣ ಪತ್ರಿಕೆಯೇ ಬಂದಿಲ್ಲ. ಶಿಷ್ಟಾಚಾರ ಉಲ್ಲಂಘನೆ ಎಲ್ಲಿಂದ ಬಂತು? ನಾವೇನು ಶಿಷ್ಟಾಚಾರ ಉಲ್ಲಂಘಿಸುತ್ತಿಲ್ಲ. ಗೋಕಾಕನಲ್ಲಿ ಎಷ್ಟು ಬಾರಿ ಶಿಷ್ಟಾಚಾರ ಅನುಸರಿಸಿದ್ದೀರಿ? ನಿಮ್ಮದು ಅಲ್ಲಿ ಪಾಳೇಗಾರಿಕೆ. ನೀವು ನಡೆದಿದ್ದೇ ದಾರಿ. ಪಾಳೇಗಾರಿಕೆ ಮಾಡಿಕೊಂಡು ಬಂದ ನೀವು ಯಾವ ಶಿಷ್ಟಾಚಾರದ ಬಗ್ಗೆ ಮಾತನಾಡುತ್ತೀರಿ? ಬೆಂಕಿ ಜತೆ ಸರಸವಾಡುತ್ತಿದ್ದೀರಾ. ಜನರು ತಕ್ಕ ಉತ್ತರ ನೀಡುತ್ತಾರೆ.| ಚನ್ನರಾಜ ಹಟ್ಟಿಹೊಳಿ, ವಿಧಾನ ಪರಿಷತ್ ಸದಸ್ಯ

ಗ್ರಾಮೀಣ ಕ್ಷೇತ್ರಕ್ಕೂ ರಮೇಶ ಜಾರಕಿಹೊಳಿಗೂ ಏನು ಸಂಬಂಧ ಎಂದು ಚನ್ನರಾಜ ಹಟ್ಟಿಹೊಳಿ ಕೇಳಿದ್ದಾರೆ. ಅವನು ಸಣ್ಣ ಹುಡುಗ. ಗಾಡಿ ಹೊಡೆದು, ಬಾಗಿಲು ಕಾದು, ಬ್ಯಾಗು ಹಿಡಿದು ಎಂಎಲ್‌ಸಿ ಆದವ. ನಾನು ಅವನ ಜತೆ ಬಹಿರಂಗ ಚರ್ಚೆ ಮಾಡುವ ಅಗತ್ಯವಿಲ್ಲ. ಅವನೇನು ಹೋರಾಟ ಮಾಡಿ, ಸಂಘಟನೆ ಮಾಡಿ ಎಂಎಲ್ಸಿ ಆಗಿಲ್ಲ. ನಾನು ಚನ್ನರಾಜ್ ಜತೆಗೆ ಬಹಿರಂಗ ಚರ್ಚೆ ಮಾಡುವುದಿಲ್ಲ. ಅಗತ್ಯ ಬಿದ್ದರೆ ಡಿಕೆಶಿ ಜತೆಗೆ ಚರ್ಚೆ ಮಾಡುತ್ತೇನೆ. ಚನ್ನರಾಜ್ ನನ್ನ ಲೆವೆಲ್ ಅಲ್ಲ, ಎಂಎಲ್‌ಸಿ ಆದರೂ ಕನಿಷ್ಠ ಜ್ಞಾನವೂ ಆತನಿಗಿಲ್ಲ. ಹಕ್ಕುಚ್ಯುತಿ ಮಂಡನೆ ಮಾಡಲು ಆತನಿಗೆ ಹಕ್ಕಿದೆ, ನನ್ನ ಪಕ್ಷ ಸಂಘಟನೆ ಮಾಡಲು ನನಗೆ ಹಕ್ಕಿಲ್ಲವೇ? ಸರ್ಕಾರಿ ಕೆಲಸದಲ್ಲಿ ಶಿಷ್ಟಾಚಾರ ಪಾಲಿಸುವಂತೆ ಆಗ್ರಹಿಸುತ್ತಿದ್ದೇನೆ ಅಷ್ಟೇ.| ರಮೇಶ ಜಾರಕಿಹೊಳಿ, ಬಿಜೆಪಿ ಶಾಸಕ, ಮಾಜಿ ಸಚಿವ

ಚನ್ನರಾಜ್-ರಮೇಶ ಕಾರು ಮುಖಾಮುಖಿ: ರಾಜಹಂಸಗಡದ ಸಿದ್ದೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ತ ಚನ್ನರಾಜ ಹಟ್ಟಿಹೊಳಿ ಪೂಜೆ ಪೂಜೆ ಮುಗಿಸಿ ದೇವಸ್ಥಾನದಿಂದ ಹೊರಡುವ ವೇಳೆ ಮಾಜಿ ಸಚಿವ ರಮೇಶ ಜಾರಕಿಹೊಳಿ ಕಾರು ಎದುರಾಯಿತು. ಎರಡು ಕಾರುಗಳು ಕೆಲ ಹೊತ್ತು ಎದು-ಬದುರಾಗಿಯೇ ನಿಂತಿದ್ದವು. ಕೊನೆಗೆ ಚನ್ನರಾಜ ಹಟ್ಟಿಹೊಳಿ ಅವರು ಚಾಲಕನಿಗೆ ಕಾರನ್ನು ರಸ್ತೆ ಬದಿ ತೆಗೆದುಕೊಂಡು ಹೋಗುವಂತೆ ತಿಳಿಸಿದರು. ಅಲ್ಲಿಯವರೆಗೆ ಜಾರಕಿಹೊಳಿ ಅವರ ಕಾರು ಅಲ್ಲೇ ನಿಂತಿತ್ತು. ಉಭಯ ಕಾರ್ಯಕರ್ತರು ಘೋಷಣೆ ಮೊಳಗಿಸಿದ ಘಟನೆಗೂ ಜನ ಸಾಕ್ಷಿಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net