ಶಿವಮೂರ್ತಿ ಶರಣರಿಗೆ ಕಾರಾಗೃಹದಿಂದ ಬಿಡುಗಡೆ ಸಾಧ್ಯತೆ

IMG_20241007_133635
Published on

ಚಿತ್ರದುರ್ಗ: ಪೋಕ್ಸೋ ಪ್ರಕರಣದ ಆರೋಪ ಎದುರಿಸುತ್ತಿರುವ ಶಿವಮೂರ್ತಿ ಮುರುಘಾ ಶರಣರಿಗೆ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಈ ಹಿಂದೆ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶ ಷರತ್ತಿನನ್ವಯ ಕಾರಾಗೃಹದಿಂದ ಬಿಡುಗಡೆ ಮಾಡಲು ಸೋಮವಾರ ನಿರ್ದೇಶನ ನೀಡಿದೆ.

ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ಮುಖ್ಯ ಸಾಕ್ಷಿದಾರರ ವಿಚಾರಣೆ ಪೂರ್ಣಗೊಳಿಸಲು ನಾಲ್ಕು ತಿಂಗಳು ಗಡುವು ನೀಡಿತ್ತು.

ಹೀಗಾಗಿ ಸಂತ್ರಸ್ತ ಬಾಲಕಿಯರು ಒಳಗೊಂಡು ಮೊದಲ ಪ್ರಕರಣದಲ್ಲಿ 13, ಎರಡನೇ ಪ್ರಕರಣದಲ್ಲಿ 12 ಮುಖ್ಯ ಸಾಕ್ಷಿದಾರರ ವಿಚಾರಣೆ ಬಹುತೇಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶರಣರ ಪರ ಹೈಕೋರ್ಟ್ ವಕೀಲ ಸಿ.ವಿ.ನಾಗೇಶ್ ಅವರ ಮನವಿಗೆ ಸ್ಪಂದಿಸಿದ ನ್ಯಾಯಾಧೀಶ ಗಂಗಾಧರಪ್ಪ ಚನ್ನಬಸಪ್ಪ ಅಡಪದ ಅವರು ಕಾರಾಗೃಹದಿಂದ ಬಿಡುಗಡೆಗೆ ನಿರ್ದೇಶನ ನೀಡಿದ್ದು, ಇನ್ನುಳಿದ ಸಾಕ್ಷಿಗಳ ವಿಚಾರಣೆ ಮುಂದುವರಿಯಲಿದೆ.

ಮೊದಲ ಪೋಕ್ಸೋ ಪ್ರಕರಣದಲ್ಲಿ ಎ1 ಆರೋಪಿಯಾದ ಶಿವಮೂರ್ತಿ ಶರಣರಿಗೆ ಹೈಕೋರ್ಟ್ 2023ರ ನ. 8ರಂದು ಜಾಮೀನು ನೀಡಿತ್ತು. ಆರೋಪಿ ಪ್ರಬಲರಾಗಿದ್ದು, ಸಾಕ್ಷಿ ನಾಶಪಡಿಸುವ, ಪ್ರಾಬಲ್ಯ ಬೀರುವ ಸಾಧ್ಯತೆ ಇದೆ ಎಂದು ಜಾಮೀನು ಪ್ರಶ್ನಿಸಿ ಸಂತ್ರಸ್ತೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಹೀಗಾಗಿ ಸುಪ್ರೀಂ ಕೋರ್ಟ್ ಮುಖ್ಯ ಸಾಕ್ಷಿ ವಿಚಾರಣೆ ಪೂರ್ಣಗೊಳ್ಳುವವರೆಗೂ ಬಂಧನದಲ್ಲಿರಲು ಸೂಚಿಸಿತ್ತು. ಅದರಂತೆ 2024ರ ಏಪ್ರಿಲ್ 29 ರಂದು ಪುನಾ ಬಂಧನಕ್ಕೆ ಒಳಗಾಗಿದ್ದರು.

ಮುಖ್ಯ ಸಾಕ್ಷ್ಯಗಳ ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಹಿಂದಿನ ಜಾಮೀನು ಅನ್ವಯವಾಗಲಿದ್ದು, ಅದರಂತೆ ಸಂಜೆ ಕಾರಾಗೃಹದಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. ಬಿಡುಗಡೆ ಬಳಿಕ ದಾವಣಗೆರೆಯ ವಿರಕ್ತ ಮಠಕ್ಕೆ ತೆರಳಲಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಹೈಕೋರ್ಟ್ ಆದೇಶದನ್ವಯ ಚಿತ್ರದುರ್ಗ ಪ್ರವೇಶಿಸಲು ಅನುಮತಿ ಇಲ್ಲ. ಹೀಗಾಗಿ ಅನುಮತಿ ನೀಡಲು ಕೋರಿ ಹೈಕೋರ್ಟಿಗೆ ಶರಣರ ಪರ ವಕೀಲರು ಮುಂಬರುವ ದಿನಗಳಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net