ಶಿವಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆದು ಬಿಜೆಪಿ ಪ್ರತಿಭಟನೆ

27 smg 7
Published on

ಶಿವಮೊಗ್ಗ: ದಕ್ಷಿಣಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬುಧವಾರ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದ ಶಿವಪ್ಪ ನಾಯಕ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಅದರಲ್ಲೂ ಬಿಜೆಪಿ ಕಾರ್ಯಕರ್ತರು ಮತ್ತು ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳ ಮೇಲೆ ನಿರಂತರವಾಗಿ ಹಲ್ಲೆ, ದೌರ್ಜನ್ಯಗಳು ನಡೆಯುತ್ತಲೇ ಇವೆ. ಇದು ನಾಗರಿಕ ಸಮಾಜ ತಲೆತಗ್ಗಿಸುವ ವಿಷಯವಾಗಿದೆ. ತಕ್ಷಣವೇ ಪ್ರವೀಣ್ ನೆಟ್ಟಾರು ಕೊಲೆ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಹಿಂದುಗಳನ್ನು ಕೊಲ್ಲುತ್ತಿರುವ ಮತಾಂದರ ಮೇಲೆ ಕಠಿಣ ಶಿಕ್ಷೆ ಆಗುತ್ತಿಲ್ಲ. ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಪಕ್ಷದ ಕಾರ್ಯಕರ್ತನನ್ನು ಹತ್ಯೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಕೋಷ್ಠಗಳ ರಾಜ್ಯ ಸಂಚಾಲಕ ಎಂ.ವಿ.ಭಾನುಪ್ರಕಾಶ್ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎನ್.ಚನ್ನಬಸಪ್ಪ ಅವರು ಕಣ್ಣೀರಿಟ್ಟು ಅಸಮಾಧಾನ ಹೊರಹಾಕಿದರು. ಮುಸ್ಲಿಂ ಗೂಂಡಾಗಳಿಂದ ಕೊಲೆಯಾದ ಪ್ರವೀಣ್ ಬಗ್ಗೆ ಏನು ಮಾತನಾಡುವುದೆಂದು ಭಾವುಕರಾದರು.

ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಮುಖಂಡರಾದ ಎಸ್.ದತ್ತಾತ್ರಿ, ಕೆ.ಇ.ಕಾಂತೇಶ್, ರಮೇಶ್, ಹೃಷಿಕೇಶ್ ಪೈ, ಎಂ.ಬಿ.ಹರಿಕೃಷ್ಣ, ಸಂತೋಷ್ ಬಳ್ಳೆಕೆರೆ, ಮೋಹನ್ ರೆಡ್ಡಿ, ಆರ್.ವಿ.ದರ್ಶನ್, ಶಂಕರ್ ಗನ್ನಿ, ಧೀರರಾಜ್ ಹೊನ್ನವಿಲೆ, ಸೀತಾಲಕ್ಷ್ಮಿ, ಆರತಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net