

ಸರಗೂರು: ದೇಶದ ಶಿಲ್ಪಕಲೆಗೆ ಅಮರಶಿಲ್ಪಿ ಜಕಣಾಚಾರಿ ಅವರು ನೀಡಿದ ಕೊಡುಗೆ ಅವಿಸ್ಮರಣೀಯವಾದುದು ಎಂದು ವಿಶ್ವಕರ್ಮ ಸೇನಾ ಸಮಿತಿ ಅಧ್ಯಕ್ಷ ಲೋಕೇಶ್ ಹೇಳಿದರು.
ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಹಾಗೂ ತಾಲೂಕು ವಿಶ್ವ ಕರ್ಮ ಸಂಘದ ವತಿಯಿಂದ ಆಯೋಜಿಸಿದ್ದ ಅಮರ ಶಿಲ್ಪಿ ಜಕಣಾಚಾರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಮರಶಿಲ್ಪಿ ಜಕಣಾಚಾರಿ ಅವರು ದಕ್ಷಿಣ ಭಾರತ ಶಿಲ್ಪಕಲೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ದ್ರಾವಿಡ ವಾಸ್ತು ಶಿಲ್ಪದಲ್ಲಿ ಇವರ ಕೈ ಮೇಲಿತ್ತು. ಅವರ ಕೆತ್ತನೆಯಲ್ಲಿ ಮೂಡಿಬಂದ ಬೇಲೂರಿನ ಜಗತ್ಪ್ರಸಿದ್ದ ಚನ್ನಕೇಶವ ದೇವಾಲಯ, ಹಳೆಬೀಡಿನ ಹೊಯ್ಸಳೇಶ್ವರ ಮತ್ತು ಶಾಂತಲೇಶ್ವರ ದೇವಾಲಯಗಳು ಮುಂದಿನ ಪೀಳಿಗೆಯ ಶಿಲ್ಪಿಗಳಿಗೆ ಮಾದರಿಯಾಗಿವೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್ ಮಾತನಾಡಿ, ವಿಶ್ವಕರ್ಮ ಸಮಾಜ ದುರ್ಬಲವಾಗಿದೆ. ಸರ್ಕಾರ ಸಮುದಾಯದ ಆಶೋತ್ತರಗಳನ್ನು ಈಡೇರಿಸಬೇಕು ಎಂದು ಹೇಳಿದರು.
ಜೆಎಸ್‌ಎಸ್ ಕಾಲೇಜಿನ ಉಪನ್ಯಾಸಕ ಸಿದ್ದಲಿಂಗಸ್ವಾಮಿ ಮಾತನಾಡಿ, ಜಕಣಾಚಾರಿ ಅವರು ತಮ್ಮ ಇಡೀ ಜೀವನವನ್ನು ಶಿಲ್ಪ ಕಲೆಯ ಕೆತ್ತನೆಯಲ್ಲಿ ತೊಡಗಿಸಿಕೊಂಡಿದ್ದರು. ಇವರು ಕಪ್ಪೆಚನ್ನಿಗರಾಯ ದೇವಸ್ಥಾನವನ್ನು ಅದ್ಭುತ ಕಲಾಕೃತಿಯಿಂದ ನಿರ್ಮಿಸಿದ್ದಾರೆ ಎಂದರು.
ವಿಶ್ವಕರ್ಮ ಮಹಾಸಭಾ ಜಿಲ್ಲಾಧ್ಯಕ್ಷ ವಿಷ್ಣು ಮಾತನಾಡಿ, ವಿಶ್ವಕರ್ಮ ಸಮುದಾಯವು ಪಂಚ ಕಸುಬುಗಳನ್ನು ಅವಲಂಬಿಸಿದ್ದು, ಇವುಗಳನ್ನು ಜೀವಂತವಾಗಿ ಉಳಿಸಿಕೊಂಡು ಹೋಗಬೇಕು ಎಂದರು.
ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ರವಿ, ತಹಸೀಲ್ದಾರ್ ಚಲುವರಾಜು, ವೈ.ಡಿ.ರಾಜಣ್ಣ ಮಾತನಾಡಿದರು. ಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದಚಾರ್, ತಾಲೂಕು ಜೆಡಿಎಸ್ ಹಿಂದುಳಿದ ವರ್ಗದ ಅಧ್ಯಕ್ಷ ದಡದಹಳ್ಳಿ ಮೂರ್ತಿ, ಜಿ.ರವಿ, ನಿವೃತ್ತ ಪಿಡಿಒ ಲಿಂಗರಾಚಾರಿ, ಕಾರ್ಯದರ್ಶಿ ಬಾಡಗರವಿ, ಶ್ರೀನಿವಾಸ, ಸ್ಪಂದನ ಸಮಿತಿ ಅಧ್ಯಕ್ಷ ಶ್ರೀನಿವಾಸ, ಎಚ್.ಎಂ. ದಾಸಚಾರಿ, ಮಂಜುನಾಥ, ನಟರಾಜು, ನಾಗರಾಜು, ವಸಂತಚಾರಿ, ಸೋಮಚಾರಿ, ಗೋವಿಂದಚಾರಿ, ಆನಂದ್, ಸುರೇಶ್, ಶ್ರೀನಿವಾಸ, ಗೋಪಾಲಸ್ವಾಮಿ, ಸತೀಶ್, ವೇಣುಗೋಪಾಲ್, ಸೋಮಣ್ಣ, ಕಲ್ಲಂಬಾಳು ಆನಂದ್, ಪ್ರವೀಣ್, ಪಪಂ ಮುಖ್ಯಾಧಿಕಾರಿ ವಸಂತಕುಮಾರಿ, ಎಪಿಎಂಸಿ ಕಾರ್ಯದರ್ಶಿ ವಸಂತಕುಮಾರ, ಶಿರಸ್ತೇದಾರ್ ಗುರುರಾಜು, ಉಪತಹಸೀಲ್ದಾರ್ ಸುನೀಲ್, ಮುಜೀಬ್ ಇದ್ದರು.