

ಕೆ.ಆರ್.ನಗರ: ಪಾಲಕರು ಮತ್ತು ಶಿಕ್ಷಕರು ಶಿಕ್ಷಣದ ಜತೆಗೆ ಮಕ್ಕಳ ಕ್ರೀಡಾ ಚಟುವಟಿಕೆಗಳಿಗೂ ಪ್ರೋತ್ಸಾಹ ನೀಡಬೇಕು ಎಂದು ಗಂಧನಹಳ್ಳಿ ಬಸವರಾಜು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.ಎಸ್.ವೆಂಕಟೇಶ್ ಮನವಿ ಮಾಡಿದರು.
ತಾಲೂಕು ಗಂಧನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಹೊಸಅಗ್ರಹಾರ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಮಕ್ಕಳನ್ನು ಓದುವ ಯಂತ್ರಗಳನ್ನಾಗಿ ಮಾಡಲಾಗುತ್ತಿದೆ. ಮಕ್ಕಳು ಆಟವಾಡಲು ಹೋದರೆ ಹಾಳಾಗುತ್ತಾರೆ ಎಂಬ ಮನಸ್ಥಿತಿ ಪಾಲಕರಲ್ಲಿದೆ. ಸಾಕ್ಷರತೆಯಲ್ಲಿ ದೇಶ ಮುಂದಿದ್ದರೂ ಕ್ರೀಡಾ ಕ್ಷೇತ್ರದಲ್ಲಿ ಹಿಂದುಳಿಯುವಂತಾಗಿದೆ ಎಂದು ವಿಷಾದಿಸಿದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಎಂ.ಬಿ.ಕುಮಾರಸ್ವಾಮಿ ಮಾತನಾಡಿ, ಕ್ರೀಡಾಕೂಟದಲ್ಲಿ ವಿಜೇತರಾದವರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುತ್ತಾರೆ ಎಂದರು.
ಕ್ರೀಡಾಕೂಟದಲ್ಲಿ 20 ಶಾಲೆಗಳಿಂದ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಧ್ವಜಾರೋಹಣವನ್ನು ಮುಖಂಡ ಜಿ.ಆರ್.ಶಿವಣ್ಣ ನೆರವೇರಿಸಿದರು. ಗ್ರಾಪಂ ಉಪಾಧ್ಯಕ್ಷ ಅಂಗಡಿ ಕುಮಾರ್, ಹಿಂದುಳಿದ ವರ್ಗಗಳ ವೇದಿಕೆ ತಾಲೂಕು ಅಧ್ಯಕ್ಷ ಗಂಧನಹಳ್ಳಿ ಹೇಮಂತ್, ಗ್ರಾಪಂ ಮಾಜಿ ಸದಸ್ಯ ಎಸ್.ರಾಮು, ಸಂಸ್ಥೆಯ ಕಾರ್ಯದರ್ಶಿ ರಾಮೇಗೌಡ, ಹಂಪಾಪುರ ಕ್ಲಸ್ಟರ್ ಸಿಆರ್‌ಪಿ ಇಂದಿರಾ, ಬಾಪೂಜಿ ಅನುದಾನಿತ ಶಾಲೆಯ ಮುಖ್ಯ ಶಿಕ್ಷಕ ಚಿಕ್ಕೇಗೌಡ, ದೈಹಿಕ ಶಿಕ್ಷಕರಾದ ಕೃಷ್ಣೇಗೌಡ, ಶೇಷಾದ್ರಿಗೌಡ, ಬಸವರಾಜು, ಗಿರೀಶ್ ಹಾಜರಿದ್ದರು.