

ಮುಂದಿನ ಪೀಳಿಗೆ ಈ ನೆಲದ ಇತಿಹಾಸ ಅರಿಯುವಂತಹ ಪಠ್ಯಕ್ರಮವನ್ನು ಶಿಕ್ಷಣದಲ್ಲಿ ಅಳವಡಿಸಬೇಕು ಎಂದು ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಆರ್.ರಘು ಕೌಟಿಲ್ಯ ತಿಳಿಸಿದರು.
ಕರ್ನಾಟಕ ಸೇನಾಪಡೆ ವತಿಯಿಂದ ನಗರದ ರೋಟರಿ ಸಭಾಂಗಣದಲ್ಲಿ ಕರ್ನಾಟಕ ಏಕೀಕರಣ ಮಹೋತ್ಸವದ ಅಂಗವಾಗಿ ಗುರುವಾರ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ರಾಷ್ಟ್ರಕವಿ ಕುವೆಂಪು ಸ್ಮರಣೆ, ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಕರ್ನಾಟಕ ಸುವರ್ಣ ಸಂಭ್ರಮ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಏಕೀಕರಣಕ್ಕಾಗಿ ಶ್ರಮಿಸಿದವರು, ನಾಡನ್ನು ಕಟ್ಟಿ ಬೆಳೆಸಿದವರನ್ನು ಸ್ಮರಿಸುವುದು ನಮ್ಮ ಕರ್ತವ್ಯ ಎಂದರು.
ಕರ್ನಾಟಕ ಸಾಮರಸ್ಯದ ಹೆಸರಿನಲ್ಲಿ ಆಕ್ರಮಣಕಾರಿ ಪ್ರವೃತ್ತಿ ಬೆಳೆಸಿಕೊಳ್ಳದೆ ಸಾಕಷ್ಟು ತ್ಯಾಗ ಮಾಡಿದೆ. ಗಡಿ ಪ್ರದೇಶಗಳಲ್ಲಿ ಊಟಿ, ಕಾಸರಗೋಡು, ಹೊಸೂರು, ನಿಪ್ಪಾಣಿ, ಮೊದಲಾದ ಅಚ್ಚ ಕನ್ನಡ ಪ್ರದೇಶಗಳನ್ನು ರಾಜಕೀಯ ಹಿತಾಸಕ್ತಿ ಇಲ್ಲದೆ ಕಳೆದುಕೊಂಡಿತು. ಈಗಲಾದರೂ ಕನ್ನಡ ಸಂಸ್ಕೃತಿ ಉಳಿಸಿಕೊಳ್ಳಲು ಎಚ್ಚೆತ್ತುಕೊಳ್ಳುವುದು ನಮ್ಮ ಜವಾಬ್ದಾರಿ ಎಂದರು.
ಬ್ರಿಟಿಷರು ಇಂಗ್ಲಿಷ್ ಹೇರಿದರೆ, ಉತ್ತರ ಭಾರತದವರು ಹಿಂದಿ ಭಾಷೆ ಹೇರುತ್ತಿದ್ದಾರೆ. ರಾಷ್ಟ್ರಭಾಷೆಯ ಕಲ್ಪನೆ ಇಲ್ಲದ ಕೆಲವರು ಕನ್ನಡವೂ ಹಿಂದಿಯಷ್ಟೇ ಮಾನ್ಯತೆ ಹೊಂದಿರುವ ರಾಷ್ಟ್ರ ಭಾಷೆ ಎಂಬ ವಾಸ್ತವ ಸ್ಥಿತಿ ಅರಿತುಕೊಂಡಿಲ್ಲ. ಹಲವು ಭಾಷೆಗಳನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ ವ್ಯವಸ್ಥಿತವಾಗಿ ಅನ್ಯ ಭಾಷೆಯ ಹೇರಿಕೆಯನ್ನು ನಾವು ಸಹಿಸಿಕೊಂಡು ಕುಳಿತುಕೊಳ್ಳುವುದಾದರೂ ಹೇಗೆ ಎಂದು ಪ್ರಶ್ನಿಸಿದರು.
ತ್ರಿಭಾಷಾ ಸೂತ್ರ ಒಪ್ಪಿಕೊಳ್ಳುವುದೇ ಆದರೆ ನಮ್ಮ ಗಡಿ ರಾಜ್ಯದ ಭಾಷೆಗಳನ್ನು ಕಲಿಯುವುದರಿಂದ ಒಕ್ಕೂಟ ವ್ಯವಸ್ಥೆ ಹಾಗೂ ಗಡಿ ಭಾಗದ ಸೌಹಾರ್ದತೆ ಕಾಯ್ದುಕೊಳ್ಳಲೂ ಅನುಕೂಲವಾಗುತ್ತದೆ. ಇದರ ಜತೆ ಜತೆಗೇ ವ್ಯವಹಾರಿಕವಾಗಿಯೂ ಗಡಿ ರಾಜ್ಯದೊಂದಿಗೆ ಸಂಬಂಧ ಸುಧಾರಿಸುತ್ತವೆ. ಇದು ವೈಜ್ಞಾನಿಕವಾಗಿ ಒಪ್ಪಿಕೊಳ್ಳಬಹುದಾದ ಸೂತ್ರ ಎಂದು ಹೇಳಿದರು.
ಹಳೆ ಮೈಸೂರು ಸಂಸ್ಥಾನ ಕಟ್ಟಿದ ನಮ್ಮ ಮೈಸೂರು ಮಹಾರಾಜರ ಇತಿಹಾಸವನ್ನು ಮಕ್ಕಳಿಗೆ ತಿಳಿಸಿಕೊಡುವಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ಅಪಚಾರ ಎಸಗಲಾಗಿದೆ. ಇನ್ನು ಮುಂದಾದರೂ ಈ ಲೋಪ ಸರಿಪಡಿಸುವ ಕಾರ್ಯ ಆಗಲೇಬೇಕಿದೆ. ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಹೆಸರನ್ನು ನಾಮಕರಣ ಮಾಡಲು ನಮ್ಮಿಂದ ಆಗಿಲ್ಲ ಎಂದರೆ ನಾವೆಷ್ಟು ಆತ್ಮವಂಚನೆಯಿಂದ ನಡೆದುಕೊಂಡಿದ್ದೇವೆ ಎಂಬುದನ್ನು ತೋರಿಸಿಕೊಡುತ್ತದೆ. ಮಾನಸಗಂಗೋತ್ರಿಗೆ 800 ಎಕರೆ ಧಾರೆ ಎರೆದ ರಾಜಮನೆತನವನ್ನು ನಾವೆಷ್ಟು ಸ್ಮರಿಸಿಕೊಳ್ಳುತ್ತಿದ್ದೇವೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ಇದೇ ವೇಳೆ ವಿವಿಧ ಕ್ಷೇತ್ರದ ಸಾಧಕರಿಗೆ ಕರ್ನಾಟಕ ಸುವರ್ಣ ಸಂಭ್ರಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮಹಾರಾಣಿ ಮಹಿಳಾ ವಿಜ್ಞಾನ ಕಾಲೇಜಿನ ಸುಮಾರು 50 ವಿದ್ಯಾರ್ಥಿನಿಯರಿಗೆ ಕೆಪಿಸಿಸಿ ಸದಸ್ಯ ಆರ್.ಜೇಸುದಾಸ್ ಪ್ರತಿಭಾ ಪುರಸ್ಕಾರ ನೀಡಿದರು.
ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್‌ಗೌಡ, ಹಿರಿಯ ಸಂಸ್ಕೃತಿ ಪೋಷಕ ಡಾ.ರಘುರಾಮ್ ಕೆ.ವಾಜಪೇಯಿ, ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸ ಗೌಡ, ಪ್ರಭುಶಂಕರ್, ಪ್ರೊ.ರಮೇಶ್ ಬಾಬು, ಕೃಷ್ಣಪ್ಪ, ನಾಗರಾಜು, ಶಿವಲಿಂಗಯ್ಯ, ಸಿಂದುವಳ್ಳಿ ಶಿವಕುಮಾರ್ ಇತರರಿದ್ದರು.