

ಚಿಕ್ಕೋಡಿ: ಶಿಕ್ಷಣ ಕ್ಷೇತ್ರಕ್ಕೆ ಲಿಂಗಾಯತ ಮಠಗಳ ಕೊಡುಗೆ ಅಪಾರವಾಗಿದೆ ಎಂದು ನಿಡಸೋಸಿ ಸಿದ್ಧಸಂಸ್ಥಾನ ಮಠದ ಡಾ. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಹೇಳಿದರು.
ಪಟ್ಟಣದ ಪದ್ಮಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಘಟಕದಿಂದ ಸೋಮವಾರ ಹಮ್ಮಿಕೊಂಡಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಮಟ್ಟದ ಲಿಂಗಾಯತ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಲಿಂಗಾಯತ ಮಠಗಳು ಶಿಕ್ಷಣದ ಜತೆಗೆ ವಸತಿ ನಿಲಯ ಪ್ರಾರಂಭಿಸಿದ ಹಿನ್ನೆಲೆಯಲ್ಲಿ ಶಿಕ್ಷಣ ವ್ಯವಸ್ಥೆ ಉತ್ತರ ಕರ್ನಾಟಕದಲ್ಲಿ ತುಂಬ ಚೆನ್ನಾಗಿ ಬೆಳೆದುಕೊಂಡು ಬಂದಿದೆ ಎಂದರು.
ವೀರಶೈವ ಲಿಂಗಾಯತ ಪಂಚಮಸಾಲಿ ಸಮುದಾಯದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ಲಿಂಗಾಯತ ಸಮುದಾಯಕ್ಕೆ ಸರ್ಕಾರದ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿಲ್ಲ. ಇದಕ್ಕಾಗಿ ಸಮುದಾಯದ ಜನರು ಒಗ್ಗಟ್ಟಾಗಿ ಹೋರಾಟ ಮಾಡಬೇಕೆಂದರು.
ಸಾನ್ನಿಧ್ಯ ವಹಿಸಿದ್ದ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಮಾತನಾಡಿ, ಜಗಜ್ಯೋತಿ ಬಸವಣ್ಣನವರು ನೂರಾರು ಶರಣರೊಂದಿಗೆ ಅನುಭವ ಮಂಟಪ ಕಟ್ಟಿ ಜಗತ್ತಿಗೆ ಪ್ರಜಾಪ್ರಭುತ್ವದ ಮಾದರಿಯನ್ನು ಮೊದಲ ಬಾರಿಗೆ ಪರಿಚಯಿಸಿದರು ಎಂದರು.
ಹರಿಹರ ಪೀಠದ ವಚನಾನಂದ ಸ್ವಾಮೀಜಿ ಬೆಳಗ್ಗೆ ಲಿಂಗಾ ದೀಕ್ಷಾ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಪುತ್ಥಳಿಯಿಂದ ಕಾರ್ಯಕ್ರಮ ನಿಯೋಜಿತ ಸ್ಥಳದವರೆಗೆ ನೂರಾರು ಮಹಿಳೆಯರು ಕುಂಭ ಹೊತ್ತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾ ಪಂಚಮಸಾಲಿ ಲಿಂಗಾಯತ ಸಮುದಾಯದ ಅಧ್ಯಕ್ಷ ಅಣ್ಣಪ್ಪ ಹಳಿಜೋಳೆ ಅಧ್ಯಕ್ಷತೆ ವಹಿಸಿದ್ದರು.
ಚಿಕ್ಕೋಡಿಯ ಸಂಪಾದನಾ ಸ್ವಾಮೀಜಿ, ಹತ್ತರಗಿಯ ಸಿದ್ದೇಶ್ವರ ಸ್ವಾಮೀಜಿ, ಬೆಂಡವಾಡದ ಗುರುಸಿದ್ಧ ಸ್ವಾಮೀಜಿ, ನಂದಿಕುರಳಿಯ ವೀರಭದ್ರ ಸ್ವಾಮೀಜಿ, ಲಕನೌದ ಬಾಲಯೋಗಿ ಮಹಾರಾಜ, ಬೆಳಗಾವಿ ಜಿಲ್ಲಾಧ್ಯಕ್ಷ ಪರಗೌಡ ದರೂರ, ನವದೆಹಲಿಯ ರಾಷ್ಟ್ರವಾದ ರಾಷ್ಟ್ರೀಯ ಅಧ್ಯಕ್ಷ ರಿತೇಶ ತೋಮರ, ಕಲ್ಮೇಶ ಕಿವಡ, ಮಲ್ಲಪ್ಪ ಕಲ್ಲಟ್ಟಿ, ಶಂಕರಗೌಡ ಪಾಟೀಲ, ಮಲ್ಲಿಕಾರ್ಜುನ ಪಾಟೀಲ, ಸುನೀಲ ಪಾಟೀಲ, ಮೀನಾಕ್ಷಿ ಪಾಟೀಲ, ಅನಸೂಯಾ ಚನ್ನವರ ಇತರರು ಇದ್ದರು.