ಶಿಕ್ಷಣ ಕ್ರಾಂತಿ ಮಾಡಿದ ಶಿವರಾತ್ರಿ ರಾಜೇಂದ್ರಶ್ರೀ ಸದಾ ಸ್ಮರಣೀಯ

06NGD4
Published on


ನಂಜನಗೂಡು: ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನು ತೆರೆದು ಶಿಕ್ಷಣದಿಂದ ವಂಚಿತರಾಗಿದ್ದ ಸಾವಿರಾರು ಜನರಿಗೆ ತ್ರಿವಿಧ ದಾಸೋಹದ ಮೂಲಕ ಶಿಕ್ಷಣ ಕ್ರಾಂತಿ ಮಾಡಿದ ಡಾ.ಶಿವರಾತ್ರಿ ರಾಜೇಂದ್ರ ಶ್ರೀಗಳು ಸದಾ ಸ್ಮರಣೀಯರು ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎನ್.ಸದಾನಂದ ಬಣ್ಣಿಸಿದರು.


ನಗರದ ವಿದ್ಯಾನಗರದ ಅನುಭವ ಮಂಟಪ ಸಭಾಂಗಣದಲ್ಲಿ ಸಂಜೆ ಸಮೃದ್ಧಿ ಗೆಳೆಯರ ಬಳಗ ಹಾಗೂ ಕದಳಿ ಮಹಿಳಾ ವೇದಿಕೆಯ ಸಂಯುಕ್ತ ಅಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಜಗದ್ಗುರು ಲಿಂಗೈಕ್ಯ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ 107ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ರಾಜೇಂದ್ರ ಶ್ರೀಗಳು ಸುತ್ತೂರು ಮಠ ವಿಶ್ವದ ಎಲ್ಲೆಡೆಯಲ್ಲಿಯೂ ಸೇವೆ ಸಲ್ಲಿಸಲು ಬೇಕಾದ ಭದ್ರ ಬುನಾದಿ ಹಾಕಿ ಕೊಟ್ಟಿದ್ದಾರೆ. ಶಿಕ್ಷಣ ದಾಸೋಹದ ಮೂಲಕ ಸಮಾಜದ ಏಳ್ಗೆ ಬಯಸಿದ ಶ್ರೀಗಳ ಜೀವನವೇ ಒಂದು ಆದರ್ಶ ಎಂದು ಬಣ್ಣಿಸಿದರು.


ಸುತ್ತೂರು ಬಿಎಡ್ ಕಾಲೇಜಿನ ಪ್ರಾಂಶುಪಾಲ ಎಚ್.ಎಂ.ಮಹೇಶ್ ಮಾತನಾಡಿ, ರಾಜೇಂದ್ರ ಶ್ರೀಗಳು ಅನಾಥರು, ಬಡವರ ಕಣ್ಣೀರು ಒರೆಸುವ ನಿಟ್ಟಿನಲ್ಲಿ ಪಟ್ಟ ಪರಿಶ್ರಮ, ಸವೆಸಿದ ಹಾದಿಯಲ್ಲಿ ನಡೆದಾಗ ಮಾತ್ರ ಕಿಂಚಿತ್ ಭಕ್ತಿ ಸಲ್ಲಿಸಲು ಸಾಧ್ಯ ಎಂದರು.


ಪ್ರಾಂಶುಪಾಲ ಡಾ.ಬಸವಣ್ಣ, ಸಮೃದ್ಧಿ ಬಳಗದ ಸಂಸ್ಥಾಪಕ ಕಲ್ಮಳ್ಳಿ ನಟರಾಜು, ಕದಳಿ ವೇದಿಕೆಯ ಅಧ್ಯಕ್ಷೆ ಮೀನಾಕ್ಷಿ ಬಸವಣ್ಣ, ಕಾಯಕ ಯೋಗಿ ಸಂಘದ ಪ್ರಭುಸ್ವಾಮಿ, ರಾಜಶೇಖರ್ ಹುಸ್ಕೂರ್, ಸುರೇಶ್, ಬಸವಣ್ಣ, ವಿರೂಪಾಕ್ಷ ನಾಗೇಂದ್ರಕುಮಾರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net