ಶಿಕ್ಷಕಿಯ ಸ್ವಂತ ಹಣದಿಂದ ಮೈದಾನ ಅಭಿವೃದ್ಧಿ : ಸ್ವಚ್ಛತೆಗೆ ಸ್ವಂತ ಹಣ ಸಹಾಯ, ಕ್ರೀಡಾ ಚಟುವಟಿಕೆಗಳಿಗೆ ಅನುಕೂಲ

0000000000
Published on

ಬಂಗಾರಪೇಟೆ ಗ್ರಾಮಾಂತರ: ಹದಗೆಟ್ಟಿದ್ದ ಶಾಲಾ ಮೈದಾನವನ್ನು ಶಿಕ್ಷಕಿಯೊಬ್ಬರು ಸ್ವಂತ ಖರ್ಚಿನಿಂದ ಅಭಿವೃದ್ಧಿ ಮಾಡಿ ಮಕ್ಕಳ ದೈಹಿಕ ಶಿಕ್ಷಣ, ಕ್ರೀಡಾ ಚಟುವಟಿಕೆಗಳ ಬಳಕೆಗೆ ಯೋಗ್ಯವಾದ ಮೈದಾನವನ್ನಾಗಿ ಮಾಡಿದ್ದಾರೆ. ಬಂಗಾರಪೇಟೆ ತಾಲೂಕಿನ ಹುಲಿಬೆಲೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಈ ಹಿಂದೆ ನೀಲಗಿರಿ ಮರಗಳು ಬೆಳೆದು ಶಾಲಾ ಮಕ್ಕಳಿಗೆ ಮೈದಾನ ಇಲ್ಲದಂತಾಗಿತ್ತು. ಶಾಲೆಯ ಎಸ್​ಡಿಎಂಸಿ ಸದಸ್ಯರು ಹಾಗೂ ಗ್ರಾಪಂ ಸಹಕಾರದಿಂದ ನೀಲಗಿರಿ ಮರಗಳನ್ನು ತೆರವು ಮಾಡಲಾಯಿತು. ಆದರೆ ಮರದ ಬುಡಗಳನ್ನು ತೆರವು ಮಾಡದ ಕಾರಣ ಗಿಡ&ಗಂಟಿಗಳು ಬೆಳೆದು ಮಳೆ ಬಂದರೆ ಮೈದಾನವೆಲ್ಲಾ ನೀರಿನಿಂದ ಕೂಡಿ ಕೆಸರು ಗದ್ದೆಯಂತೆ ಆಗುತ್ತಿತ್ತು. ಇದರಿಂದ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳಿಗೆ ಬಡಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಂತಹ ಸಮಯದಲ್ಲಿ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಯುವರಾಣಿ ತಮ್ಮ ಸ್ವಂತ ಖರ್ಚಿನಿಂದ ಜೆಸಿಬಿ ಯಂತ್ರಗಳನ್ನು ಬಳಸಿ ನೀಲಗಿರಿ ಬುಡ ಹಾಗೂ ಗಿಡಗಂಟಿಗಳನ್ನು ತೆರವು ಮಾಡಿಸಿದರು. ನಂತರ ಹಳ್ಳ ದಿನ್ನೆಗಳಿಂದ ಕೂಡಿದ್ದ ಮೈದಾನವನ್ನು ಸಮತಟ್ಟು ಮಾಡಿ ಮಳೆ ನೀರು ನಿಲ್ಲದಂತೆ ಮಾಡಿಸಿದ್ದಾರೆ. ಜತೆಗೆ ಶಾಲೆಯ ಇತರ ಶಿಕ್ಷಕರ ಜತೆಗೂಡಿ ಶಾಲಾ ಆವರಣದಲ್ಲಿ ಹಣ್ಣು ಬಿಡುವಂತಹ ಮತ್ತು ಪರಿಸರಕ್ಕೆ ಸಹಕಾರಿಯಾಗಿರುವ ಗಿಡಗಳನ್ನು ನೆಟ್ಟು ಪೋಷಿಸಲು ಮುಂದಾಗಿದ್ದಾರೆ. ಪ್ರಸ್ತುತ ಮೈದಾನ ತಾಲೂಕು ಅಥವಾ ಹೋಬಳಿ ಮಟ್ಟದ ಕ್ರೀಡೆಗಳನ್ನು ನಡೆಸುವಷ್ಟು ಯೋಗ್ಯವಾಗಿದ್ದು, ಶಿಕ್ಷಕರು ಮನಸ್ಸು ಮಾಡಿದರೆ ಮಕ್ಕಳಿಗೆ ಶಿಕ್ಷಣ ನೀಡುವುದರ ಜತೆಗೆ ಶಾಲೆಯನ್ನು ಅಭಿವೃದ್ಧಿ ಮಾಡಬಹುದು ಎಂಬುದಕ್ಕೆ ಹುಲಿಬೆಲೆ ಶಾಲೆಯ ಮೈದಾನ ಸಾಯಾಗಿದ್ದು, ಶಿಕ್ಷಕರ ಈ ಸಾಧನೆಯು ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ.

ಹುಲಿಬೆಲೆ ಪ್ರೌಢಶಾಲೆಗೆ 3 ವರ್ಷಗಳ ಹಿಂದೆ ಬಂದಾಗ ಶಾಲಾ ಆವರಣದಲ್ಲಿ ನೀಲಗಿರಿ ಮತ್ತು ಗಿಡಗಂಟಿಗಳಿಂದ ತುಂಬಿ ಬಳಕೆಗೆ ಯೋಗ್ಯವಲ್ಲದಂತಿತ್ತು. ಇದರಿಂದ ಆಟದ ಮೈದಾನ ಇದ್ದು, ಇಲ್ಲದಂತಾಗಿತ್ತು. ಪ್ರಸ್ತುತ ಶಿಕ್ಷಕಿ ಯುವರಾಣಿ ಪರಿಶ್ರಮದಿಂದ ಆಟದ ಮೈದಾನ ಸ್ವಚ್ಛವಾಗಿ ಮಾರ್ಪಟ್ಟಿದೆ. ಶಿಕ್ಷಣ ಇಲಾಖೆ ಮತ್ತು ಗ್ರಾಪಂನಿಂದ ಕಾಂಪೌಂಡ್​ ನಿರ್ಮಿಸುವುದರ ಜತೆಗೆ ಇನ್ನಷ್ಟು ಅಭಿವೃದ್ಧಿ ಮಾಡಬೇಕಿದೆ. ಮುನೇಶ್​, ಮುಖ್ಯಶಿಕ್ಷಕ, ಹುಲಿಬೆಲೆ ಪ್ರೌಢಶಾಲೆ. ಇತ್ತೀಚೆಗೆ ಸುರಿದ ಮಳೆಯಿಂದ ಮಳೆ ನೀರು ಮೈದಾನವೆಲ್ಲಾ ತುಂಬಿ ಓಡಾಡಲು ಕಷ್ಟವಾಗಿತ್ತು. ಕ್ರೀಡೆಗಳಲ್ಲಿ ಮಕ್ಕಳು ರಾಜ್ಯ ಮಟ್ಟದಲ್ಲಿ ಪ್ರತಿನಿಧಿಸುತ್ತಿದ್ದು, ಮಕ್ಕಳ ದೈಹಿಕ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹಾಗೂ ಹೆಚ್ಚಿನ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವ ಹಿನ್ನೆಲೆಯಲ್ಲಿ ಶಿಕ್ಷಕರ ಸಹಕಾರದೊಂದಿಗೆ ಸ್ಚಚ್ಛತೆಯೊಂದಿಗೆ ಸುಸಜ್ಜಿತ ಮೈದಾನವನ್ನಾಗಿ ಮಾಡಿದ್ದೇವೆ. ಯುವರಾಣಿ, ದೈಹಿಕ ಶಿಕ್ಷಣ ಶಿಕ್ಷಕಿ ಹುಲಿಬೆಲೆ ಪ್ರೌಢಶಾಲೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net