

ಕೆ.ಆರ್.ನಗರ: ಒಬ್ಬ ರಾಜಕಾರಣಿ ಕೆಟ್ಟರೆ ರಾಜ್ಯ ಕೆಡುವುದಿಲ್ಲ. ಆದರೆ ಒಬ್ಬ ಶಿಕ್ಷಕ ಕೆಟ್ಟರೆ ಆ ಶಾಲೆ ಮತ್ತು ವಿಧ್ಯಾರ್ಥಿಗಳೆಲ್ಲ ಕೆಡುತ್ತಾರೆ. ಆದ್ದರಿಂದ ಕರ್ತವ್ಯ ಲೋಪ ಮಾಡಬೇಡಿ ಎಂದು ಶಿಕ್ಷಕರಿಗೆ ಶಾಸಕ ಸಾ.ರಾ.ಮಹೇಶ್ ಮನವಿ ಮಾಡಿದರು.
ಪಟ್ಟಣದ ಡಾ.ರಾಜ್‌ಕುಮಾರ್ ಬಾನಂಗಳದಲ್ಲಿ ವೇದಿಕೆಯಲ್ಲಿ ತಾಲೂಕು ಆಡಳಿತ, ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಡಾ.ಸರ್ವಪಲ್ಲಿ ರಾಧಾಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣ ಕ್ಷೇತ್ರ ಬಹಳ ಪವಿತ್ರ ಕ್ಷೇತ್ರವಾಗಿದ್ದು, ಇಲ್ಲಿ ಕೆಲಸ ನಿರ್ವಹಿಸುವ ನೀವೇ ಪುಣ್ಯವಂತರು ಎಂದು ಬಣ್ಣಿಸಿದರು.
ರಾಜಕೀಯ, ಉದ್ಯಮದಲ್ಲಿ ಎತ್ತರಕ್ಕೆ ಬೆಳದಷ್ಟೂ ಅಸೂಯೆ, ವಿರೋಧಿಸುವವರು ಹೆಚ್ಚು. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಎತ್ತರಕ್ಕೆ ಬೆಳದವರನ್ನು ಪ್ರೋತ್ಸಾಹಿಸುತ್ತಾ, ಸನ್ಮಾನಿಸುತ್ತಾ ಇನ್ನೂ ಹೆಚ್ಚು ಬೆಳೆಯುವಂತೆ ಆಶೀರ್ವದಿಸುವುದು ಈ ಶಿಕ್ಷಣ ಕ್ಷೇತ್ರ ಎಂದರು.
ಎನ್.ಮಹೇಶ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಶಿಕ್ಷಣ ಸಚಿವನಾಗುವಂತೆ ತಿಳಿಸಿದ್ದರು. ಆದರೆ ನಾನು ನಿರಾಕರಿಸಿ ಗುಬ್ಬಿ ಶ್ರೀನಿವಾಶ್ ಅವರಿಗೆ ಸಚಿವ ಸ್ಥಾನ ಕೊಡಿಸಿದೆ. ಆದರೆ ನಾನೇನಾದರೂ ಶಿಕ್ಷಣ ಸಚಿವನಾಗಿದ್ದರೆ 3 ಪ್ರತಿಷ್ಠಿತ ಸಂಸ್ಥೆಯನ್ನು ಪರವಾನಗಿ ರದ್ದು ಮಾಡಿ ಕ್ರಿಮಿನಲ್ ಪ್ರಕರಣ ದಾಖಲಿಸುತ್ತಿದ್ದೆ ಎಂದು ತಿಳಿಸಿದರು.
ಶಾಸಕನಾಗಿ ಶಿಕ್ಷಣ, ಆರೋಗ್ಯ, ಸಾರಿಗೆ ಮತ್ತು ನೀರಾವರಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದೇನೆ. ಸರ್ಕಾರ ಈಗ ಶಿಕ್ಷಣಕ್ಕೆ ಬೇಕಾದಷ್ಟು ಸೌಲಭ್ಯವನ್ನು ಒದಗಿಸುತ್ತಿದೆ. ಎಸ್‌ಎಸ್‌ಎಲ್ಸಿ ಮತ್ತು ಪಿಯುಸಿಯಲ್ಲಿ ಒಂದೆರಡು ಶಾಲೆಗಳನ್ನು ಹೊರತುಪಡಿಸದರೆ ಉಳಿದ ಶಾಲೆಗಳ ಫಲಿತಾಂಶ ಉತ್ತಮವಾಗಿದೆ. ಆದ್ದರಿಂದ ಖಾಸಗಿ ಶಾಲೆಗಳ ವ್ಯಾಮೋಹ ಬಿಟ್ಟು ಸರ್ಕಾರಿ ಶಾಲೆಗೆ ಆದ್ಯತೆ ನೀಡಿ ಸರ್ಕಾರಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಉತ್ತಮ ಮತ್ತು ಗುಣಮಟ್ಟದ ಶಿಕ್ಷಣ ನೀಡಿ ಎಂದು ತಿಳಿಸಿದರು.
ಬೆಳಗ್ಗೆ ಸಂಜೆ ನಿಮ್ಮ ಸೇವೆ ಮಾಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ನೀವು ಮತ ನೀಡಿದರೆ ನಿಮ್ಮ ಜತೆಯಲ್ಲಿ ರಾಜಕಾರಣ ಮಾಡುತ್ತೇನೆ. ನನ್ನಗಿಂತ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡರೆ ಮತ್ತೆಂದೂ ಎಲ್ಲೂ ನನಗೆ ಮತ ನೀಡುವಂತೆ ಕೇಳದೆ ರಾಜಕೀಯದಿಂದ ದೂರ ಇರುತ್ತೇನೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರವನ್ನು ಶ್ರೀಕೃಷ್ಣರಾಜೇಂದ್ರ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜಿನಿಂದ ಡಾ.ರಾಜ್‌ಕುಮಾರ್ ಬಾನಂಗಳದ ವೇದಿಕೆ ಕಾರ್ಯಕ್ರಮದವರೆಗೆ ಮೆರವಣಿಗೆಯಲ್ಲಿ ತರಲಾಯಿತು.
ಇದೇ ವೇಳೆ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನೌಕರರಿಗೆ ಮತ್ತು ಸೇವಾವಧಿಯಲ್ಲಿ ನಿಧಾನರಾದ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.
ಪುರಸಭಾಧ್ಯಕ್ಷ ಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಪುಟ್ಟಸಿದ್ದಶೆಟ್ಟಿ, ತಹಸೀಲ್ದಾರ್ ಎಸ್.ಸಂತೋಷ್, ಇಒ ಎಚ್.ಕೆ.ಸತೀಶ್, ಪುರಸಭಾ ಮುಖ್ಯಾಧಿಕಾರಿ ಡಾ.ಜಯಣ್ಣ, ಬಿಇಒ ಟಿ.ಎನ್.ಗಾಯತ್ರಿ, ನಿವೃತ್ತ ಉಪಾನ್ಯಾಸಕರಾದ ಕೆ.ಆರ್.ಲಕ್ಕೇಗೌಡ, ಎಸ್.ಆರ್.ರಾಮೇಗೌಡ, ಸರ್ಕಾರಿ ನೌಕರರ ತಾಲೂಕು ಅಧ್ಯಕ್ಷ ಸಿ.ಜೆ.ಅರುಣ್‌ಕುಮಾರ್, ಬಿಆರ್‌ಸಿ ವೆಂಕಟೇಶ್ ಸೇರಿದಂತೆ ಇನ್ನಿತರ ಗಣ್ಯರು ಮತ್ತು ಶಿಕ್ಷಕರು ಉಪಸ್ಥಿತರಿದ್ದರು.