

ಬೆಂಗಳೂರು
ರಾಜ್ಯ ಸರ್ಕಾರ ಶಾಲಾ-ಕಾಲೇಜುಗಳನ್ನು ತೆರೆದಿದ್ದೇ ಆದಲ್ಲಿ ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಆರೋಗ್ಯ ವಿಮೆ ನೀಡಬೇಕೆಂದು ಶಿಕ್ಷಕರು ಮತ್ತು ಉಪನ್ಯಾಸಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಈಗಾಗಲೇ ಮುಖ್ಯಮಂತ್ರಿಗೆ ಪತ್ರ ಬರೆದು ಕರೊನಾ ಹಿನ್ನೆಲೆಯಲ್ಲಿ ಪಾಠ ಮಾಡಲು ಶಿಕ್ಷಕರಿಗೆ ಭಯ ಇದೆ. ಒಂದು ವೇಳೆ ಶಾಲೆ ಆರಂಭವಾಗಿ ಬೋಧನೆ ಮಾಡಬೇಕಾದ ಸನ್ನಿವೇಶ ಎದುರಾದರೆ ಸರ್ಕಾರ ಶಿಕ್ಷಕರಿಗೆ ಕರೊನಾ ವಿಮೆ ನೀಡಬೇಕೆಂದು ಮನವಿ ಮಾಡಿದೆ.
ಈಗಾಗಲೇ ಕರೊನಾ ಕೆಲಸದಲ್ಲಿ ನಿರತರಾಗಿರುವ ಶಿಕ್ಷಕರಿಗೆ ಪರಿಹಾರ ಪ್ಯಾಕೇಜ್‌ನಲ್ಲಿ ಕರೊನಾ ವಿಮೆ ಇದೆ. ಆದರೆ, ವಿದ್ಯಾಗಮ ಯೋಜನೆಯಲ್ಲಿ ಬೋಧನೆ ಮಾಡುವ ಶಿಕ್ಷಕರಿಗಿಲ್ಲ. ಈ ಯೋಜನೆ ಅಡಿ ಸಾಕಷ್ಟು ಶಿಕ್ಷಕರು ಬೋಧನೆ ಮಾಡುತ್ತಿದ್ದಾರೆ. ಶಾಲಾ ಹೊರ ಭಾಗದಲ್ಲಿ ಅಲ್ಲದೆ, ವಿದ್ಯಾರ್ಥಿಗಳ ಮನೆ ಮುಂದೆಯೇ ಹೋಗಿ ಬೋಧನೆ ಮಾಡುತ್ತಿದ್ದಾರೆ. ಈ ವೇಳೆ ಕರೊನಾ ಸೋಂಕು ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಸರ್ಕಾರ ಇವರಿಗೆ ಆರೋಗ್ಯ ವಿಮೆ ನೀಡಬೇಕೆಂದು ಸಂಘದ ಅಧ್ಯಕ್ಷ ವಿ.ಎಂ.ನಾರಾಯಣ ಸ್ವಾಮಿ ಒತ್ತಾಯಿಸಿದ್ದಾರೆ.
ಕಾಲೇಜುಗಳು ಆರಂಭವಾದರೆ, ಉಪನ್ಯಾಸಕರು ವಿದ್ಯಾರ್ಥಿಗಳೊಂದಿಗೆ ಬೆರೆತು ಬೋಧನೆ ಮಾಡಬೇಕಿರುತ್ತದೆ. ಇಂತಹ ವೇಳೆ ಕರೊನಾ ಸೋಂಕು ತಗುಲಿದರೆ ಕಷ್ಟ. ಈ ಹಿನ್ನೆಲೆಯಲ್ಲಿ ಉಪನ್ಯಾಸಕರಿಗೆ ವಿಮೆ ನೀಡಬೇಕೆಂದು ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷ ಎ.ಎಚ್.ನಿಂಗೇಗೌಡ ಆಗ್ರಹಿಸಿದ್ದಾರೆ.