

ಮೂಡಿಗೆರೆ: ಸಮಾಜ ಸುಧಾರಿಸುವ ಶಕ್ತಿ ಹೊಂದಿರುವ ಶಿಕ್ಷಕರಿಗೆ ನಿವೃತ್ತಿ ಎಂಬ ಮಾನದಂಡವಿದ್ದರೂ ಶಿಕ್ಷಕರೆಂಬ ಹೆಸರನ್ನು ಅಳಿಸಿ ಹಾಕಲು ಸಾಧ್ಯವಿಲ್ಲ ಎಂದು ಹಿರಿಯ ಸಾಹಿತಿ ಹಳೇಕೋಟೆ ರಮೇಶ್ ಹೇಳಿದರು.
ನಿವೃತ್ತ ಶಿಕ್ಷಕ ದಂಪತಿ ಡಿ.ಎಂ.ಕುಮಾರಯ್ಯ ಮತ್ತು ಎಚ್.ಜಿ.ಶಾರದಮ್ಮ ಅವರಿಗೆ ಶನಿವಾರ ಲಯನ್ಸ್ ಸಂಸ್ಥೆಯಿಂದ ಪಟ್ಟಣದಲ್ಲಿ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಕ ಕರ್ತವ್ಯ ನಿರ್ವಹಣೆ ವೇಳೆ ಸಾವಿರಾರು ವಿದ್ಯಾರ್ಥಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡುತ್ತಾರೆ. ಶಿಕ್ಷಕರ ಶ್ರಮದಿಂದಾಗಿ ಸಮಾಜ ಸುಧಾರಣೆಯತ್ತ ಸಾಗುತ್ತಿದೆ. ಪ್ರತಿ ವ್ಯಕ್ತಿ ಕೂಡ ಜೀವಿತಾವಧಿಯಲ್ಲಿ ಒಂದೊಂದು ರೀತಿಯ ವೃತ್ತಿ ಧರ್ಮ ಪಾಲಿಸಬೇಕಾಗಿದೆ. ಈ ಎಲ್ಲ ಪ್ರಕ್ರಿಯೆ ನಡೆಸಲು ಶಿಕ್ಷಣ ಬೇಕಾಗಿದೆ. ಅದಕ್ಕೆ ಶಿಕ್ಷಕರ ಶ್ರಮ ಅಗತ್ಯ ಎಂದು ತಿಳಿಸಿದರು.
ಸನ್ಮಾನ ಸ್ವೀಕರಿಸಿದ ನಿವೃತ್ತ ಶಿಕ್ಷಕ ಡಿ.ಎಂ.ಕುಮಾರಯ್ಯ ಮಾತನಾಡಿ, ಸಾವಿರಾರು ಮಕ್ಕಳಿಗೆ ಗುರುವಾಗಿ ಸೇವೆ ಸಲ್ಲಿಸಿ ಅವರೆಲ್ಲರನ್ನೂ ಸಮಾಜದ ಮುಖ್ಯವಾಹಿನಿಗೆ ಕರೆತರಲು ಶಿಕ್ಷಕ ವೃತ್ತಿಯಿಂದ ಸಾಧ್ಯವಾಗಿದೆ ಎಂದು ತಿಳಿಸಿದರು.
ಲಯನ್ಸ್ ಸಂಸ್ಥೆ ಅಧ್ಯಕ್ಷ ಬಿ.ಎಲ್.ದಿನೇಶ್, ಕಾರ್ಯದರ್ಶಿ ಕೆ.ಜಿ.ಅಣ್ಣೇಗೌಡ, ಖಜಾಂಚಿ ಎಂ.ಎಚ್.ಹರ್ಷ, ವಕೀಲರಾದ ಡಿ.ಕೆ.ಪ್ರಸನ್ನ ಕುಮಾರ್, ಜಗದೀಶ್, ಗೋಪಾಲಗೌಡ, ಜಯಕುಮಾರ್ ಇತರರಿದ್ದರು.