ಬೆಂಗಳೂರು 2020-21ನೇ ಸಾಲಿನ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಅಧಿಕಾರಿಗಳ ಸಾಮಾನ್ಯ ವರ್ಗಾವಣೆಗಳನ್ನು ಕಡ್ಡಾಯವಾಗಿ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸುತ್ತಿದ್ದು, ಸೇವಾ ಪ್ರಮಾಣ ಪತ್ರ ಸಲ್ಲಿಕೆಗೆ ನಿಗದಿ ಪಡಿಸಿದ್ದ ನಿಯಮವನ್ನು ಸಡಿಲಿಸಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ, ಅನುದಾನಿತ ಶಿಕ್ಷಣ ಸಂಸ್ಥೆಯ ನೌಕರರನ್ನು ವಿವಾಹವಾಗಿರುವ ಶಿಕ್ಷಕ ಅಥವಾ ಶಿಕ್ಷಕಿ ತಾವು ಕರ್ತವ್ಯ ನಿರ್ವಹಿಸುತ್ತಿರುವ ನೇಮಕಾತಿ ಪ್ರಾಧಿಕಾರದಿಂದ ಸೇವಾ ಪ್ರಮಾಣ ಪತ್ರವನ್ನು ಪಡೆದು ಅದನ್ನು ಸಲ್ಲಿಕೆ ಮಾಡಲು ಸೂಚಿಸಿತ್ತು. ಈ ಸಂದರ್ಭದಲ್ಲಿ ಸೇವಾ ಪ್ರಮಾಣ ಪತ್ರಕ್ಕಾಗಿ ರಾಜ್ಯ ಕಚೇರಿಗಳಿಗೆ ಭೇಟಿ ನೀಡುವುದು ತಪ್ಪಿಸುವ ಸಲುವಾಗಿ ಆಯಾ ಜಿಲ್ಲಾ ಮಟ್ಟದ ಮುಖ್ಯಸ್ಥರಿಂದ ಸೇವಾ ಪ್ರಮಾಣ ಪತ್ರ ಪಡೆಯಲು ಅವಕಾಶ ಕಲ್ಪಿಸಿದೆ. ಇದು ಕೇವಲ ಈ ಸಾಲಿಗೆ ಮಾತ್ರ ಅನ್ವಯಿಸಲಿದೆ. ಈ ರೀತಿ ಜಿಲ್ಲಾ ಮಟ್ಟದ ಮುಖ್ಯಸ್ಥರಿಂದ ಸೇವಾ ದೃಢೀಕರಣ ಪತ್ರವನ್ನು ನೀಡುವಾಗ ಶಿಕ್ಷಕರ ಹಾಗೂ ಅವರ ಪತಿ/ಪತ್ನಿ ಅವರ ಸೇವಾ ದೃಢೀಕರಣ ವಿವರಗಳಲ್ಲಿ ಯಾವುದೇ ಲೋಪದೋಷಗಳಾದಲ್ಲಿ ಸಂಬಂಧಿಸಿದ ಜಿಲ್ಲಾ ಮಟ್ಟದ ಮುಖ್ಯಸ್ಥರು ಹಾಗೂ ಸಂಬಂಧಿಸಿದ ಶಿಕ್ಷಕರು ಮತ್ತು ಪತಿ,ಪತ್ನಿ ಅವರೇ ನೇರ ಹೊಣೆಯಾಗಿರುತ್ತಾರೆಂದು ಎಚ್ಚರಿಕೆಯನ್ನು ಸಹ ನೀಡಿದೆ. ವರ್ಗಾವಣೆ ಅಂಕಿ-ಅಂಶ: ವರ್ಗಾವಣೆಗೆ 3,718 ಅರ್ಜಿಗಳು ಸಲ್ಲಿಕೆಯಾಗಿವೆ. ಕೋರಿಕೆ ವರ್ಗಾವಣೆ(ಜಿಲ್ಲೆ ಒಳಗೆ)-2,603, ಜಿಲ್ಲೆ ಹೊರಗೆ- 580, ವಲಯದ ಹೊರಗೆ- 282, ಪರಸ್ಪರ ವರ್ಗಾವಣೆ(ಜಿಲ್ಲೆ ಒಳಗೆ)- 110, ಜಿಲ್ಲೆ ಹೊರಗೆ ಮತ್ತು ವಲಯದ ಒಳಗೆ- 37, ವಲಯದ ಹೊರಗೆ-14 ಮತ್ತು ವಿಶೇಷ ವರ್ಗಾವಣೆ- 92 ಅರ್ಜಿಗಳು ಸಲ್ಲಿಕೆಯಾಗಿವೆ. ವಲಯ ವರ್ಗಾವಣೆ: ಶಿಕ್ಷಕರಿಗೆ ವಲಯದ ಹೊರಗೂ ವರ್ಗಾವಣೆ ಪಡೆಯಲು ಮುಕ್ತ ಆಯ್ಕೆಗೆ ಅವಕಾಶ ನೀಡಬೇಕೆಂದು ಶಿಕ್ಷಕರು ಕೋರಿದ್ದಾರೆ. ಕಳೆದ ವರ್ಷ ಕಡ್ಡಾಯ ವರ್ಗಾವಣೆ ಶಿಕ್ಷೆಗೆ ಒಳಗಾದ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವಲಯದಿಂದ ಮತ್ತೊಂದು ವಲಯಕ್ಕೆ ವರ್ಗಾವಣೆ ಅವಕಾಶವನ್ನು ಪರಿಷ್ಕೃತಗೊಳಿಸಿದ್ದು, ಈ ಬಾರಿ ವರ್ಗಾವಣೆ ನಿಯಮದಲ್ಲಿ ವಲಯ ವರ್ಗಾವಣೆ ನಿಷೇಧಿಸಿದೆ. ಇದರಿಂದಾಗಿ 50 ವರ್ಷ ಮೀರಿದ, ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿರುವ ಶಿಕ್ಷಕಿಯರಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳು ಇಲ್ಲದ ಸ್ಥಳಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಅನ್ಯಾಯವಾಗಲಿದೆ. ಈ ಹಿನ್ನೆಲೆಯಲ್ಲಿ ವರ್ಗಾವಣೆ ಅವಕಾಶ ಕುರಿತು ನಿರ್ಬಂಧಗಳನ್ನು ಹೇರದೇ ವಲಯದಿಂದ ಹೊರಗೂ ವರ್ಗಾವಣೆ ಪಡೆಯಲು ಅವಕಾಶ ನೀಡಬೇಕೆಂದು ಶಿಕ್ಷಕರು ಸಚಿವರಲ್ಲಿ ಮನವಿ ಮಾಡಿದ್ದಾರೆ. ಆದರೆ, ಈ ಹಿಂದೆ ವಲಯದ ಹೊರಗೆ ವರ್ಗಾವಣೆ ಅವಕಾಶ ನೀಡಿದ್ದಾಗ ಶಿಕ್ಷಕರೇ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ಹೊಸ ವರ್ಗಾವಣೆಯಲ್ಲಿ ಇದನ್ನು ಕೈ ಬಿಡಲಾಯಿತು. ಇದೀಗ ಮತ್ತೆ ಹಳೇ ಪದ್ಧತಿಯನ್ನು ಜಾರಿಗೆ ತರುವುದು ಸಾಧ್ಯವಿಲ್ಲವೆಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.