ಶಿಕ್ಷಕರ ವರ್ಗ, ಮತ್ತೆ ಕಗ್ಗಂಟು: 80ಕ್ಕೂ ಹೆಚ್ಚು ತಾಲೂಕಿನ ಟೀಚರ್ಸ್​ಗೆ ವರ್ಗಾವಣೆ ಭಾಗ್ಯವಿಲ್ಲ!

Teachers
Published on

| ವಿಲಾಸ ಮೇಲಗಿರಿ ಬೆಂಗಳೂರು

ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್​ಗೆ ಕ್ಷಣಗಣನೆ ಆರಂಭವಾಗಿದೆ. ವಿಶೇಷ ಕಾನೂನು, ನಿಯಮಾವಳಿ, ಶಿಕ್ಷಕರ ಬೇಡಿಕೆಗೆ ತಕ್ಕಂತೆ ಕಾಲ ಕಾಲಕ್ಕೆ ವರ್ಗಾವಣೆ ನಿಯಮ ಮಾರ್ಪಾಡು ಮಾಡಿದರೂ ವರ್ಗ ಪ್ರಕ್ರಿಯೆ ಗೊಂದಲದ ಗೂಡಾಗಿದೆ. ಬಹುನಿರೀಕ್ಷಿತ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಸೋಮವಾರ(ನ.29) ಆರಂಭಗೊಳ್ಳಲಿದೆ. ಎರಡ್ಮೂರು ವರ್ಷಗಳಿಂದ ವರ್ಗಾವಣೆಗಾಗಿ ಕಾಯುತ್ತಿರುವವರಿಗೆ ಸ್ಥಳ ಆಯ್ಕೆ ಈ ಬಾರಿಯೂ ಕನ್ನಡಿಯೊಳಗಿನ ಗಂಟಾಗಲಿದೆ.

ಅಧಿಕೃತ ಮೂಲಗಳ ಪ್ರಕಾರ ರಾಜ್ಯದ 35 ತಾಲೂಕುಗಳ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 45 ತಾಲೂಕುಗಳ ಪ್ರೌಢ ಶಾಲಾ ಶಿಕ್ಷಕರಿಗೆ ವರ್ಗಾವಣೆ ಭಾಗ್ಯವಿಲ್ಲ! ಇನ್ನೊಂದು ಅಂದಾಜಿನ ಪ್ರಕಾರ 65 ತಾಲೂಕಿನ ಪ್ರಾಥಮಿಕ ಮತ್ತು 57 ತಾಲೂಕಿನ ಪ್ರೌಢ ಶಾಲಾ ಶಿಕ್ಷಕರು ವರ್ಗಾವಣೆ ವಂಚಿತರಾಗಲಿದ್ದಾರೆ ಎಂಬ ಮಾಹಿತಿ ಇದೆ. ವರ್ಗಾವಣೆ ಕಾಯ್ದೆ ಸರಳೀಕರಣಗೊಳ್ಳುವ ಬದಲು ವರ್ಷದಿಂದ ವರ್ಷಕ್ಕೆ ಸಂಕೀರ್ಣಗೊಳ್ಳುತ್ತಿದೆ. ಒಂದೊಂದು ನಿಯಮ ರೂಪಿಸಿದಾಗಲೂ ಸಮಸ್ಯೆ ಬಿಗಡಾಯಿಸುತ್ತಿವೆ. ವರ್ಗಾವಣೆ ಕಾಯ್ದೆ ಸರಳೀಕ ರಣಗೊಳಿಸುವ ಸರ್ಕಾರದ ಭರವಸೆ ಭರವಸೆಯಾಗಿಯೇ ಉಳಿದಿದೆ. ಒಟ್ಟು ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳ ಆಧಾರದ ಮೇಲೆ ವರ್ಗಾವಣೆ ಶೇಕಡ ವಾರು ಲೆಕ್ಕಾಚಾರ ಮಾಡಬೇಕು ಎಂಬ ಈ ಹಿಂದಿನ ಸರ್ಕಾರದ ಆದೇಶ ಮಾರ್ಪಡಿಸಿ, ಯಾವುದೇ ಘಟಕದಲ್ಲಿ ಮಂಜೂರಾದ ಹುದ್ದೆಗಳ ಸಂಖ್ಯೆ ಆಧಾರದ ಮೇಲೆ ಶೇಕಡಾವಾರು ಮಿತಿ ಲೆಕ್ಕಾಚಾರ ಮಾಡಲು ಆದೇಶಿಸಲಾಗಿದೆ. ಈ ಕಾರಣಕ್ಕೆ ವರ್ಗ ಪ್ರಕ್ರಿಯೆ ಕೂಡ ಮುಂದೂಡಲಾಗಿತ್ತು. ಆದರೆ, ಈ ಮಾರ್ಪಾಡಿನಿಂದಲೂ ಸಮಸ್ಯೆಗೆ ಪರಿಹಾರ ಕಷ್ಟ ಎನ್ನಲಾಗುತ್ತದೆ.

ಎಲ್ಲೆಲ್ಲಿ ಸಮಸ್ಯೆ?: ಹೊಸಪೇಟೆ, ಬಳ್ಳಾರಿ ಪಶ್ಚಿಮ, ಬಳ್ಳಾರಿ ಪೂರ್ವ, ಹರಪನಹಳ್ಳಿ, ಸಂಡೂರು, ಶಿರಗುಪ್ಪ, ಚಿಂಚೋಳಿ, ಚಿತ್ತಾಪುರ, ಜೇವರ್ಗಿ, ಸೇಡಂ, ಬಾಗೇಪಲ್ಲಿ, ಗುಡಿಬಂಡೆ, ಶಿಡ್ಲಘಟ್ಟ, ಬೆಂಗಳೂರು ದಕ್ಷಿಣ ವಲಯ 3, ಬೆಂಗಳೂರು ದಕ್ಷಿಣ ವಲಯ 4, ಆನೇಕಲ್, ಮೊಳಕಾಲ್ಮೂರು, ಪಾವಗಡ, ಅಥಣಿ, ಕಾಗವಾಡ, ರಾಯಭಾಗ, ಚಿಕ್ಕೋಡಿ, ಹುಕ್ಕೇರಿ, ಮೂಡಲಗಿ... ಹೀಗೆ ಅನೇಕ ತಾಲೂಕುಗಳಲ್ಲಿ ಶೇ.25ಕ್ಕೂ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇರುವುದರಿಂದ ಈ ತಾಲೂಕಿನ ಶಿಕ್ಷಕರಿಗೆ ವರ್ಗಾವಣೆ ಸಿಗುವುದು ತೀರಾ ಅಪರೂಪ.

ಶೇ.25 ತಂದ ಸಮಸ್ಯೆ: ಶೇ.25ಕ್ಕಿಂತ ಹೆಚ್ಚು ಶಿಕ್ಷಕರ ಕೊರತೆ ಇರುವ ತಾಲೂಕಿನಿಂದ ಹೊರ ಹೋಗಲು ವರ್ಗಾವಣೆಯಲ್ಲಿ ಅವಕಾಶವಿಲ್ಲ. ಹಾಗಾಗಿ ಸುಮಾರು 80ಕ್ಕೂ ಹೆಚ್ಚು ತಾಲೂಕುಗಳ ಶಿಕ್ಷಕರು ವರ್ಗಾವಣೆ ಕನಸಾಗಿಯೇ ಉಳಿಯುವ ಸಾಧ್ಯತೆಗಳಿವೆ.

ವರ್ಗಾವಣೆಯಲ್ಲೂ ಲಕ್?: ಸರ್ಕಾರದ ಈಗಿನ ಅಂಕಿ-ಅಂಶಗಳ ಪ್ರಕಾರ 80ಕ್ಕೂ ಹೆಚ್ಚು ತಾಲೂಕುಗಳಲ್ಲಿ ಶೇ.25ಕ್ಕಿಂತ ಹೆಚ್ಚು ಹುದ್ದೆ ಖಾಲಿ ಇರುವ ಹಿನ್ನೆಲೆಯಲ್ಲಿ ಈ ತಾಲೂಕಿನ ಶಿಕ್ಷಕರಿಗೆ ವರ್ಗಾವಣೆ ಸಿಗುವುದಿಲ್ಲ. ಆದರೆ, ಈ ತಾಲೂಕುಗಳನ್ನು ಬೇರೆ ತಾಲೂಕಿನ ಶಿಕ್ಷಕರು ಆಯ್ಕೆ ಮಾಡಿಕೊಂಡಲ್ಲಿ ಖಾಲಿ ಹುದ್ದೆ ಶೇಕಡವಾರು ಪ್ರಮಾಣ ಕಡಿಮೆಯಾಗುತ್ತದೆ. ಆಗ ಕೌನ್ಸೆಲಿಂಗ್​ನಲ್ಲಿ ಆಯ್ಕೆಗೆ ಅವಕಾಶವಾಗುತ್ತದೆ. ಹೀಗಾಗಿ ಶಿಕ್ಷಕರಿಗೆ ಸ್ಥಳ ಆಯ್ಕೆ ಲಕ್ಕಿ ಡ್ರಾದಂತಾದರೂ ಅಚ್ಚರಿಪಡಬೇಕಿಲ್ಲ.

ಸರಳೀಕೃತ ನಿಯಮ ಏಕಿಲ್ಲ?: ಕಡ್ಡಾಯ ಹಾಗೂ ಹೆಚ್ಚುವರಿ ವ್ಯಾಪ್ತಿಗೆ ಬರುವ 3 ಸಾವಿರ ಶಿಕ್ಷಕರ ವರ್ಗಾವಣೆಗೆ ಸರ್ಕಾರ ಸುಗ್ರೀವಾಜ್ಞೆ ಜಾರಿಗೆ ತಂದು ಪರಿಹಾರ ಕಲ್ಪಿಸಿದೆ. ಆದರೆ, ಶಿಕ್ಷಕರ ವರ್ಗಾವಣೆಗೆ ಕೌನ್ಸಿಲಿಂಗ್ ನೀತಿ ಜಾರಿಗೆ ತಂದು 14 ವರ್ಷ ಉರುಳಿದರೂ ಸ್ಪಷ್ಟ ಮತ್ತು ಸರಳೀಕೃತ ನಿಯಮ ರೂಪಿಸದೇ ಶಿಕ್ಷಕರನ್ನು ಪದೇಪದೆ ಗೊಂದಲಕ್ಕೆ ದೂಡುವುದು ಯಾವ ನ್ಯಾಯ ಎಂಬುದಾಗಿ ಶಿಕ್ಷಕರು ಪ್ರಶ್ನಿಸುತ್ತಾರೆ.

ಶಿಕ್ಷಕರಿಗೆ ಸಿಗದ ಭರವಸೆ: ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆಗೆ ಬದಲಾಗಿ ಮಂಜೂರಾದ ಹುದ್ದೆಗಳಿಗೆ ಶೇ.25 ಖಾಲಿ ಹುದ್ದೆ ಪರಿಗಣಿಸುವ ಪರಿಷ್ಕೃತ ಆದೇಶವಿದ್ದರೂ ಶಿಕ್ಷಕರಿಗೆ ವರ್ಗಾವಣೆ ಭರವಸೆ ಮಾತ್ರ ಸಿಕ್ಕಿಲ್ಲ.

ಬೇಡಿಕೆಗಳೇನು?

  • ಶೇ.25ಕ್ಕಿಂತ ಹೆಚ್ಚು ಹುದ್ದೆ ಖಾಲಿ ಇರುವ ತಾಲೂಕಿನ ಒಳಗಡೆ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ಇದರಿಂದ ಖಾಲಿ ಹುದ್ದೆ ಮಿತಿಗಾಗಲಿ, ವರ್ಗಾವಣೆ ಪ್ರಕ್ರಿಯೆಗೆ ಯಾವುದೇ ಅಡ್ಡಿಯಾಗದು.
  • ಶೇ.25 ಖಾಲಿ ಹುದ್ದೆ ಮಿತಿ ಇಡದೆ ಶಿಕ್ಷಕರು ಬಯಸುವ ಜಿಲ್ಲೆಗೆ ಒಂದು ಬಾರಿ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು.

ಘಟಕದ ಒಳಗೆ ವರ್ಗಕ್ಕೆ ಆಗ್ರಹ: 2020 ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಅಧಿನಿಯಮದ ಅನ್ವಯ ಶೇ.25ಕ್ಕಿಂತ ಹೆಚ್ಚು ಹುದ್ದೆ ಖಾಲಿ ಇರುವ ತಾಲೂಕುಗಳಿಂದ ಶಿಕ್ಷಕರ ವರ್ಗಾವಣೆಯನ್ನು ನಿರ್ಬಂಧಿಸಲಾಗಿದೆ. ಇಂತಹ ತಾಲೂಕುಗಳಿಂದ ಬರುವ ಕೋರಿಕೆ ವರ್ಗಾವಣೆಗಳನ್ನು ತಿರಸ್ಕರಿಸಲಾಗಿದೆ. ಶೇ.25ಕ್ಕಿಂತ ಹೆಚ್ಚು ಶಿಕ್ಷಕರ ಕೊರತೆ ಇರುವ ತಾಲೂಕುಗಳ ವ್ಯಾಪ್ತಿಯಲ್ಲಿ ಘಟಕದ ಒಳಗೆ ವರ್ಗಾವಣೆ ಪಡೆಯಲು ನಿಯಮದಲ್ಲಿ ಯಾವುದೇ ನಿರ್ಬಂಧವಿಲ್ಲ. ಹಾಗಾಗಿ ಘಟಕದ ಒಳಗೆ ವರ್ಗಾವಣೆಗೆ ಏಕೆ ಅವಕಾಶ ನಿರಾಕರಿಸಬೇಕು ಎಂಬುದು ಶಿಕ್ಷಕರ ಪ್ರಶ್ನೆ.

ಶಿಕ್ಷಕರು ಕಾರ್ಯ ನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆಗೆ ಬದಲಾಗಿ ಮಂಜೂರಾದ ಹುದ್ದೆಗಳಿಗೆ ಶೇ.25 ಖಾಲಿ ಹುದ್ದೆ ಪರಿಗಣಿಸುವುದರಿಂದ ಹೆಚ್ಚು ಶಿಕ್ಷಕರ ವರ್ಗಾವಣೆಗೆ ಅವಕಾಶ ಸಿಗಲಿದೆ. ಮೊದಲು 51 ತಾಲೂಕಿನ ಶಿಕ್ಷಕರ ವರ್ಗಾವಣೆಗೆ ಆಸ್ಪದವಿರಲಿಲ್ಲ. ಈಗ ಆ ಸಂಖ್ಯೆ 23 ಕ್ಕೆ ಇಳಿದಿದೆ. ಇದು ಶಿಕ್ಷಕರಿಗೆ ಪ್ರಯೋಜನವಾಗಲಿದೆ.

| ಆರ್.ವಿಶಾಲ್ ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net