ಶಿಕ್ಷಕ ಸಮಾಜದ ಅಮೂಲ್ಯ ಆಸ್ತಿ

teachers day
ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಉದ್ಘಾಟಿಸಿದರು. ಟಿ.ಡಿ.ರಾಜೇಗೌಡ, ಸುನೀತಾ, ರಂಗನಾಥಸ್ವಾಮಿ, ಪ್ರಕಾಶ್, ಎನ್.ಜಿ.ರಾಘವೇಂದ್ರ ಇದ್ದರು.
Published on

ಶೃಂಗೇರಿ: ಜಗತ್ತಿಗೆ ಗುರುಪರಂಪರೆಯ ಪರಿಕಲ್ಪನೆ ನೀಡಿದ ದೇಶ ನಮ್ಮದು. ಗುರುವಿನ ಜತೆ ಗುರಿ ಇದ್ದರೆ ಮಾತ್ರ ಮಕ್ಕಳಲ್ಲಿ ನಾವು ಶ್ರೇಷ್ಠ ವ್ಯಕ್ತಿತ್ವ ರೂಪಿಸಲು ಸಾಧ್ಯ. ಶಿಕ್ಷಣ ನೀಡುವ ಶಿಕ್ಷಕರ ನೈತಿಕ ಮೌಲ್ಯ ಪರಿಶುದ್ಧವಾಗಿರಬೇಕು ಎಂದು ಹೊಸನಗರ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಶ್ರೀಪತಿ ಹಳಗುಂದ ತಿಳಿಸಿದರು.

ಅವರು ಮಂಗಳವಾರ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶಿಕ್ಷಕರ ದಿನಾಚರಣೆ ಸಮಿತಿ ಆಯೋಜಿಸಿದ್ದ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು.
ಮಕ್ಕಳು ಖಾಲಿ ಹಾಳೆಗಳು. ಅವುಗಳಿಗೆ ಉನ್ನತ ಮೌಲ್ಯವನ್ನು ತುಂಬಿಸುವ ಶಿಕ್ಷಕ ಸಮಾಜದ ಅಮೂಲ್ಯ ಆಸ್ತಿ. ವಿಶ್ವಮಾನವ ಅಲ್ಪಮಾನವನಾಗುತ್ತಿದ್ದಾನೆ. ಮುಗ್ಧ ಮನಸ್ಸಿಗೆ ಬಿತ್ತಿಕೊಂಡ ಕ್ರೋಧಗಳನ್ನು ಶಮನ ಮಾಡುವ ಅದ್ಭುತ ಶಕ್ತಿ ಗುರುವಿಗೆ ಇದೆ. ಶಿಕ್ಷಿಸುವ, ಕ್ಷಮಿಸುವ, ಕಲಿಸುವ ಮಹತ್ತರ ಪಾತ್ರವನ್ನು ಶಿಕ್ಷಕ ನಿರ್ವಹಿಸುತ್ತಿದ್ದಾನೆ. ವಿದ್ಯಾರ್ಥಿ ಹಾಗೂ ಶಿಕ್ಷಕರ ನಡುವೆ ಗೋಡೆ ಇರಬಾರದು. ಅಲ್ಲಿ ಕೇವಲ ಭಾವಾನಾತ್ಮಕ ಸಂಬಂಧವಿರಬೇಕು ಎಂದರು.
ರಾಮ-ರಾವಣ, ಕೃಷ್ಣ-ಶಕುನಿ ಹೀಗೆ ಜಗತ್ತಿನಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ಒಳ್ಳೆಯದನ್ನು ವಿದ್ಯಾರ್ಥಿಗಳಿಗೆ ಕಲಿಸಿ ಅವರಲ್ಲಿರುವ ನಕಾರಾತ್ಮಕ ಚಿಂತನೆ ಹೊರದೂಡುವ ವೃತ್ತಿ ಗುರುವಿನ ಮೂಲ ಪ್ರವೃತ್ತಿ ಆಗಬೇಕು. ಗುರು ಕತೆ ಆದರೆ ವಿದ್ಯಾರ್ಥಿ ದಂತಕತೆ ಆಗಬೇಕು. ಶಿಕ್ಷಕ ಏಣಿ ಮತ್ತು ದೋಣಿ ಇದ್ದ ಹಾಗೆ. ಮಕ್ಕಳನ್ನು ಹತ್ತಿಸಿ ಅವರಿಗೆ ಸರಿಯಾದ ಮಾಗದರ್ಶನ ನೀಡುವ ಶಿಕ್ಷಕನು ಪಾಲಕರ ಬಳಿಕ ಮುಖ್ಯ ಪಾತ್ರ ನಿರ್ವಹಿಸುವ ಉತ್ತಮ ಶಿಲ್ಪಿ. ಶಿಕ್ಷಕರಿಗೆ ತಮ್ಮ ಸ್ಥಾನದ ಪ್ರಜ್ಞೆ ಅವಶ್ಯಕ ಎಂದು ಹೇಳಿದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಜಾತಿ, ಧರ್ಮ, ಮತಗಳ ವಿಷಬೀಜವನ್ನು ಮಕ್ಕಳಲ್ಲಿ ಶಿಕ್ಷಕರು ಬಿತ್ತಬಾರದು. ವಿದ್ಯಾರ್ಥಿಗಳು ದೇಶವನ್ನು ಕಟ್ಟುವ ಭವಿಷ್ಯದ ನಾಯಕರು. ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಹಾಗೂ ಬೌದ್ಧಿಕ ಮೌಲ್ಯಗಳನ್ನು ಬೆಳೆಸುವ ಕಾಯಕ ಶಿಕ್ಷಕರ ಪ್ರಮುಖ ಗುರಿ ಆಗಬೇಕು. ಶಿಕ್ಷಕರಿಗೆ ಕೂಡ ಹಲವು ಸಮಸ್ಯೆಗಳಿದ್ದು ಅದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ಚರ್ಚಿಸಿ ಅವರಿಗೆ ನ್ಯಾಯ ಒದಗಿಸಲಾಗುವುದು ಎಂದರು.
ಕಾರ್ಯಕ್ರಮವನ್ನು ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ್ ಪೂಜಾರಿ ಉದ್ಘಾಟಿಸಿದರು. ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಗಣ್ಯರು ಪುಪ್ಪನಮನ ಸಲ್ಲಿಸಿದರು. ಶಿಕ್ಷಕರ ಸಮಸ್ಯೆಗಳ ಕುರಿತು ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಜಿಲ್ಲೆಯ ಎಂಟು ಬ್ಲಾಕ್‌ಗಳ ಅತ್ಯುತ್ತಮ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ, ಕಿರಿಯ,ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರಿಗೆ ತಾಲೂಕು ಮಟ್ಟದ ಪ್ರಶಸ್ತಿ, ನಿವೃತ್ತ ಶಿಕ್ಷಕರಿಗೆ ಗೌರವ ಸಮರ್ಪಣೆ ಹಾಗೂ ವಿಶೇಷ ಪ್ರಶಸ್ತಿಯನ್ನು ನೀಡಿ ಶಾಸಕ ಟಿ.ಡಿ.ರಾಜೇಗೌಡ ಗೌರವಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜಿ.ರಾಘವೇಂದ್ರ, ಶಾಸಕ ಟಿ.ಡಿ.ರಾಜೇಗೌಡ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರಣ್ಯಪುರ ಗ್ರಾಪಂ ಉಪಾಧ್ಯಕ್ಷೆ ಸುನೀತಾ, ಸದಸ್ಯರಾದ ಪ್ರುಲ್ಲ, ಮಮತಾ ಉದಯ, ಮಂಜುನಾಥ್, ಉಪನಿರ್ದೇಶಕರಾದ ಜಿ.ರಂಗನಾಥಸ್ವಾಮಿ,ಪ್ರಕಾಶ್, ಇಲಾಖೆಯ ನೋಡೆಲ್ ಅಧಿಕಾರಿ ವಿಜಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net