

ಹೊಸನಗರ: ಶರಾವತಿ ಮುಳುಗಡೆ ಸಂತ್ರಸ್ತರ ಶಾಶ್ವತ ಪರಿಹಾರಕ್ಕೆ ಸಂಸದ ಬಿ.ವೈ.ರಾಘವೇಂದ್ರರ ಬದ್ಧತೆ ಮತ್ತು ಹೋರಾಟ ಗಮನಾರ್ಹ. ಆದರೆ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಈ ಬಗ್ಗೆ ಬಾಲಿಶ ಹೇಳಿಕೆ ನೀಡುತ್ತ ತಾವೇ ಮಾಡಿದ್ದು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಎಂಸಿಎ ಮಾಜಿ ನಿರ್ದೇಶಕ ಎಚ್.ಆರ್.ತೀರ್ಥೇಶ್ ಆರೋಪಿಸಿದ್ದಾರೆ. ಶರಾವತಿ ಸಂತ್ರಸ್ತರ ಕುರಿತು ಶಾಶ್ವತ ಪರಿಹಾರಕ್ಕೆ ಸಂಸದರು ಸಂಸತ್ ಅಧಿವೇಶನದಲ್ಲಿ ಸಾಕಷ್ಟು ಬಾರಿ ಚರ್ಚಿಸಿದ್ದಾರೆ. ಬಿಜೆಪಿ ಸಚಿವರು ಸರ್ಕಾರದೊಂದಿಗೆ ಸತತವಾಗಿ ಸಂತಸ್ತರ ಪರವಾಗಿ ಗಮನ ಸೆಳೆಯುತ್ತಿದ್ದಾರೆ. ಈ ಕುರಿತು ರಾಜ್ಯಮಟ್ಟದ ಅರಣ್ಯ ಮತ್ತು ಕಂದಾಯ ಸಚಿವರು, ಅಧಿಕಾರಿಗಳೊಂದಿಗೆ ಸಹ ಚರ್ಚಿಸಿ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಂತ್ರಸ್ಥರ ಪ್ರಮುಖರೊಂದಿಗೆ ಸಭೆಯನ್ನು ನಡೆಸಿದ್ದಾರೆ. ಕಾನೂನಾತ್ಮಕ ಹೋರಾಟದ ಲ ದೇಶದ ಸರ್ವೋಚ್ಚ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ಜಂಟಿ ಸಮೀಕ್ಷೆ ನಡೆಸಿ ಸೂಕ್ತ ವರದಿ ನೀಡುವಂತೆ ಸೂಚಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಜಂಟಿ ಸಮೀಕ್ಷೆ ಆರಂಭವಾಗಿದ್ದು ಸಮೀಕ್ಷೆಗಳಲ್ಲಿ ಕೆಲವು ಲೋಪದೋಷ ಕಂಡು ಬರುತ್ತಿದೆ ಎಂದು ಸಂತ್ರಸ್ತರು ತಮ್ಮ ಅಳಲು ತೋಡಿಕೊಂಡಿದ್ದು ಇದರ ಪರಿಹಾರಕ್ಕೆ ಕೂಡ ಸಂಸದರು ಸೂಚಿಸಿದ್ದಾರೆ. ಆದರೆ ಮಧು ಬಂಗಾರಪ್ಪ, ಬೇಳೂರು ಗೋಪಾಲಕೃಷ್ಣ ಅವರು ವಾಸ್ತವ ತಿರುಚಿ ವಿನಾಕಾರಣ ಸಂಸದರ ಮೇಲೆ ಆಪಾದನೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.