ಶಾಸಕರ ಸೂಚನೆಯಂತೆ ರೈಲ್ವೇ ಅಂಡರ್‌ಪಾಸ್ ಸ್ವಚ್ಛಗೊಳಿಸಿದ ನಗರಸಭೆ ಅಧಿಕಾರಿಗಳು / ನಗರದ ರಾಜಕಾಲುವೆಗಳನ್ನು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಲು ಶಾಸಕರ ಸೂಚನೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಚಿಕ್ಕಬಳ್ಳಾಪುರ ರಸ್ತೆಯ ಅರಹಳ್ಳಿ ಗೇಟ್ ಸಮೀಪದ ರೈಲ್ವೇ ಅಂಡರ್ ಪಾಸ್‌ನಲ್ಲಿ ನೀರು ಸರಾಗವಾಗಿ ಹೋಗುವ ಹಾಗೆ ನಗರಸಭೆಯಿಂದ ಸ್ವಚ್ಛತಾ ಕಾರ್ಯವನ್ನು ಬುಧವಾರ ಕೈಗೊಳ್ಳಲಾಗಿದೆ.

ಮಂಗಳವಾರ ರಾತ್ರಿ ಸುರಿದ ಮಳೆಯಿಂದ ಅಂಡರ್ ಪಾಸ್‌ನಲ್ಲಿ ನೀರು ನಿಂತು ಎರಡು ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಕಾರು ಸಿಕ್ಕಿಹಾಕಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿತ್ತು. ಇದರಿಂದ ರಾತ್ರಿ ಒಂದು ತಾಸಿಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಆಗಿತ್ತು. ನಂತರ ನಗರಸಭೆ ಮತ್ತು ಪೋಲಿಸರು ಸ್ಥಳಕ್ಕೆ ಧಾವಿಸಿ ನೀರನ್ನು ಹೊರ ತೆಗೆದು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದರು.

ಈ ವಿಷಯ ಶಾಸಕ ಕೊತ್ತೂರು ಮಂಜುನಾಥ್ ರವರ ಗಮನಕ್ಕೆ ಬರುತ್ತಿದ್ದಂತೆ ಕಳೆದ ರಾತ್ರಿಯೇ ಅಧಿಕಾರಿಗಳೊಂದಿಗೆ ಮಾತನಾಡಿ, ಇನ್ನು ಮುಂದೆ ಆ ರೀತಿ ಆಗದಂತೆ ಸರಿಪಡಿಸಲು ಸೂಚಿಸಿದರಲ್ಲದೆ ಮಳೆಗಾಲ ಪ್ರಾರಂಭವಾಗುತ್ತಿದೆ. ನಗರದ ರಾಜಕಾಲುವೆಗಳು, ಚರಂಡಿಗಳು ಸ್ವಚ್ಛಗೊಳಿಸಬೇಕು. ನೀರು ನಗರದ ಒಳಗೆ ಬರದಂತೆ ರಾಜ ಕಾಲುವೆ ಮೂಲಕ ಕೆರೆಸೇರುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಬೆಳ್ಳಿಗ್ಗೆ ನಗರಸಭೆ ಅಧಿಕಾರಿಗಳು ರೈಲ್ವೇ ಅಂಡರ್ ಪಾಸ್ ಬಳಿ ನೀರು ಹೋಗಲು ಇದ್ದ ಪೈಪುಗಳಲ್ಲಿ ತುಂಬಿದ್ದ ತ್ಯಾಜ್ಯವನ್ನು ಹೊರತೆಗೆದು ನೀರು ಹೋಗುವಂತೆ ಮಾಡಲಾಗಿದೆ. ಹಾಗೂ ಅಂಡರ್ ಪಾಸ್ ಒಳಗಡೆ ತುಂಬಿದ್ದ ಕೆಸರನ್ನು ಜೆಸಿಬಿಗಳ ಮೂಲಕ ಹೊರತೆಗೆದು ಸ್ವಚ್ಛತೆ ಕಾರ್ಯವನ್ನು ಕೈಗೊಂಡಿದ್ದಾರೆ.

ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಅಂಡರ್ ಪಾಸ್‌ಗಳು :
ಕೋಲಾರ ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರಿನ ತನಕ ನ್ಯಾರೋಗ್ಯಾಜ್ ರೈಲ್ವೇ ರಸ್ತೆಯನ್ನು ಬ್ರಾಡ್‌ಗೇಜ್ ರಸ್ತೆಯನ್ನಾಗಿ ನಿರ್ಮಾಣ ಮಾಡುವ ಸಂದರ್ಭದಲ್ಲಿ ನಗರ ಪ್ರದೇಶ ಮತ್ತು ಪಟ್ಟಣ ಪ್ರದೇಶಗಳಲ್ಲಿ ಹಾಗೂ ರೈಲ್ವೇ ರಸ್ತೆಯನ್ನು ದಾಟಿ ಹೋಗುವ ಸಂಪರ್ಕ ರಸ್ತೆಗಳಲ್ಲಿ ನಿರ್ಮಿಸಿರುವ ಅಂಡರ್ ಪಾಸ್‌ಗಳಲ್ಲಿ ನೀರು ಸರಾಗವಾಗಿ ಹೋಗಲು ಸರಿಯಾದ ವ್ಯವಸ್ಥೆ ಕಲ್ಪಿಸದ ಕಾರಣ ಕೋಲಾರ ನಗರದಲ್ಲಿ ನಿರ್ಮಾಣವಾಗಿರುವ ರೈಲ್ವೇ ಪಾಸ್ ಸೇರಿದಂತೆ ಶ್ರೀನಿವಾಸಪುರದಲ್ಲಿರುವ ಎರಡು ರೈಲ್ವೇ ಅಂಡರ್ ಪಾಸ್‌ಗಳಲ್ಲಿ ಮಳೆ ಬಂದರೆ ಇದೇ ರೀತಿ ನೀರು ನಿಂತು ಸಾರ್ವಜನಿಕರಿರ ವಾಹನಗಳು ಓಡಾಡಲು ಅನಾನುಕೂಲಗಳು ಉಂಟಾಗುತ್ತಿವೆ.

ಶ್ರೀನಿವಾಸಪುರ ಪಟ್ಟಣದಲ್ಲಿರುವ ಎರಡು ರೈಲ್ವೇ ಅಂಡರ್ ಪಾಸ್‌ಗಳಲ್ಲಿ ಒಂದಾದ ಉನಿಕಿಲಿ ರಸ್ತೆಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್‌ನಲ್ಲಿ ನೀರು ತುಂಬಿ ತೊಂದರೆ ಉಂಟಾಗುತ್ತಿತ್ತು. ಈಗ ಅದನ್ನು ದುರಸ್ಥಿಗೊಳಿಸಿದ ನಂತರ ನೀರು ಹೋಗುತ್ತಿದೆ. ಅದೇ ರೀತಿ ಕೋಲಾರ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಅರಹಳ್ಳಿ ಗೇಟ್ ಬಳಿಯ ರೈಲ್ವೇ ಅಂಡರ್ ಪಾಸ್‌ನಲ್ಲಿ ನೀರು ಸರಾಗವಾಗಿ ಹೋಗುವಂತೆ ರೈಲ್ವೇ ಅಧಿಕಾರಿಗಳು ದುರಸ್ಥಿಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಪಡಿಸಿದ್ದಾರೆ.

ಚಿತ್ರ ೦೭ ಕೆ.ಎಲ್.ಆರ್. ೦೧ : ಕಳೆದ ರಾತ್ರಿ ಮಳೆ ನೀರು ತುಂಬಿದ್ದ ರೈಲ್ವೇ ಅಂಡರ್ ಪಾಸ್‌ನಲ್ಲಿ ನಗರಸಭೆಗೆ ಅಧಿಕಾರಿಗಳು ಬುಧವಾರ ಜೆಸಿಬಿ ಮೂಲಕ ಸ್ವಚ್ಛಗೊಳಿಸುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net