ಶಾಲಾ ಶಿಕ್ಷಣ ಇಲಾಖೆಯು (ಪದವಿಪೂರ್ವ) ರಾಜ್ಯಮಟ್ಟದ ಯುವತಿಯರ ಅಥ್ಲೆಟಿಕ್ಸ್

3
Published on

ಶಾಲಾ ಶಿಕ್ಷಣ ಇಲಾಖೆಯು (ಪದವಿಪೂರ್ವ) ರಾಜ್ಯಮಟ್ಟದ ಯುವತಿಯರ ಅಥ್ಲೆಟಿಕ್ಸ್ ಕೂಟದ 1,500 ಮೀ.ಓಟದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಾಗಿನಿ ಪ್ರಥಮ ಸ್ಥಾನ ಪಡೆದರು.

ಶಾಲಾ ಶಿಕ್ಷಣ ಇಲಾಖೆಯು (ಪದವಿಪೂರ್ವ) ಆರ್.ವಿ. ಪಿಯು ಕಾಲೇಜು ಆಶ್ರಯದಲ್ಲಿ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ಆರಂಭಗೊಂಡ ಕ್ರೀಡಾಕೂಟದಲ್ಲಿ ನಾಗಿನಿ 4 ನಿಮಿಷ 49.2 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಈ ಸಾಧನೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಚರಿಷ್ಮಾ ದ್ವಿತೀಯ, ಬೆಳಗಾವಿಯ ಅಕ್ಷರಾ ಮಾಜುಕರ ತೃತೀಯ ಸ್ಥಾನ ಪಡೆದರು.

ಶಾಟ್‌ಪಟ್ ಸ್ಪರ್ಧೆಯಲ್ಲಿ ಬೆಂಗಳೂರು ದಕ್ಷಿಣದ ಸಂಜನಾ ಎಂ.ರೆಡ್ಡಿ ಪ್ರಥಮ, ದಕ್ಷಿಣ ಕನ್ನಡದ ಶ್ರೀಮಯಿ ಕುಲಕರ್ಣಿ ದ್ವಿತೀಯ ಹಾಗೂ ಉಡುಪಿಯ ಅಕ್ಷತಾ ಶೆಟ್ಟಿ ತೃತೀಯ ಸ್ಥಾನ ಪಡೆದರು. ಹರ್ಡಲ್ಸ್‌ನಲ್ಲಿ ದ.ಕನ್ನಡದ ಸಾಕ್ಷಿ ಕ್ರಿಸ್ಟಿನಾ ಪ್ರಥಮ, ವಿಜಯಪುರದ ರಮ್ಯಾ ಕದಂ ದ್ವಿತೀಯ ಹಾಗೂ ಬೆಂ.ಉತ್ತರದ ಪಿ.ಹರ್ಷಿತಾ ತೃತೀಯ ಸ್ಥಾನ ಪಡೆದರು. ಲಾಂಗ್‌ಜಂಪ್‌ನಲ್ಲಿ ಉಡುಪಿಯ ಪೂರ್ಣಿಮಾ ಪ್ರಥಮ, ಅವನಿ ಗಣೇಶ್ ದ್ವಿತೀಯ, ಉತ್ತರ ಬೆಂ.ಉತ್ತರದ ಬಿ.ಆರ್.ದೀಕ್ಷಿತಾ ತೃತೀಯ ಸ್ಥಾನ ಪಡೆದರು.

ಕ್ರೀಡಾಕೂಟಕ್ಕೆ ಚಾಲನೆ: ಶಾಲಾ ಶಿಕ್ಷಣ ಇಲಾಖೆಯ ಕ್ರೀಡಾ ನಿರ್ದೇಶಕ ಸಿ.ಜಿ.ರಮೇಶ್ ಅವರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಾತಿಯಲ್ಲಿ ಕ್ರೀಡಾಪಟುಗಳಿಗೆ ಶೇ 2 ಮೀಸಲಾತಿಯಿದ್ದು, ಅದರ ಪ್ರಯೋಜನ ಪಡೆಯಬೇಕು. ರಾಜ್ಯ ಹಾಗೂ ದೇಶವನ್ನು ಪ್ರತಿನಿಧಿಸಿದರೆ ಉದ್ಯೋಗ ಅವಕಾಶವೂ ಇದೆ. ಹೀಗಾಗಿ ನಾಡಿನ ಕೀರ್ತಿ ಬೆಳಗಿಸಲು ಕ್ರೀಡಾಪಟುಗಳು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವೆ ಪ್ರೊ.ಸಹನಾ ಡಿ.ಗೌಡ, ಡಿಡಿಪಿಯು ಎಂ.ಪಿ.ನಾಗಮ್ಮ, ರಾಜ್ಯ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಬಸವರಾಜು, ಅಂತಾರಾಷ್ಟ್ರೀಯ ಕ್ರೀಡಾಪಟು ಎಂ.ವಿ.ನಾಗೇಂದ್ರಪ್ರಸಾದ್, ಜಿಲ್ಲಾ ಪಿಯು ಕಾಲೇಜು ಪ್ರಾಂಶುಪಾಲರ ಸಂಘದ ಅಧ್ಯಕ್ಷ ಎಂ.ವಿ.ಹನುಮಂತ ರಾವ್, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಮಂಜೇಗೌಡ, ಜಿಲ್ಲಾ ಪಿಯು ಕಾಲೇಜು ಉಪನ್ಯಾಸಕರ ಸಂಘದ ನಿರ್ದೇಶಕ ಎಂ.ಎಂ.ಮಹದೇವ್, ಜಿಲ್ಲಾ ಕ್ರೀಡಾ ಸಂಯೋಜಕ ಕೆ.ಆರ್.ಮುರಳೀಧರ್, ಎಂ.ರಾಜ್‌ಕುಮಾರ್, ಆರ್.ವಿ.ಪಿಯು ಕಾಲೇಜು ಪ್ರಾಂಶುಪಾಲ ಪ್ರಸಾದ್ ರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net