

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ನೀಡಿ, ಸೂಚಿಸಿದ ಪ್ರಕಾರ 800 ಪಿಯು ವಿಜ್ಞಾನ ಉಪನ್ಯಾಸಕರ ಹುದ್ದೆಗಳ ಸೇರಿ 15 ಸಾವಿರ ಶಾಲಾ ಶಿಕ್ಷಕರ ಹುದ್ದೆಗಳ ಭರ್ತಿಗೆ ಪ್ರಸ್ತಾವನೆ ಸಿದ್ಧಪಡಿಸಿ ಸಲ್ಲಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಐದು ಸಾವಿರ ಹುದ್ದೆಗಳ ಭರ್ತಿಗೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಇವು ಹೊರತುಪಡಿಸಿ ಇನ್ನೂ 15 ಸಾವಿರ ಶಿಕ್ಷಕರ ಹುದ್ದೆಗಳನ್ನು ತುಂಬುವ ಅಗತ್ಯವಿದೆ ಎಂದರು.
ಎಸ್‌ಸಿ ಮೀಸಲು ವರ್ಗೀಕರಣಕ್ಕೆ ಸಂಬಂಧಿಸಿದಂತೆ ನ್ಯಾ.ಎಚ್.ಎನ್.ನಾಗಮೋಹನ್ ದಾಸ್ ನೇತೃತ್ವದ ಆಯೋಗ ವರದಿ ಸಲ್ಲಿಕೆ, ಸರ್ಕಾರದಿಂದ ಅಂಗೀಕಾರದ ನಂತರ ಕಲ್ಯಾಣ ಕರ್ನಾಟಕದ ಶಿಕ್ಷಕರ ಹುದ್ದೆಗಳ ಭರ್ತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು.
ಸುಪ್ರೀಂ ಕೋರ್ಟ್ ಆದೇಶದಂತೆ ಐದು, ಎಂಟು, ಒಂಭತ್ತನೇ ತರಗತಿ ಮಂಡಳಿ ಪರೀಕ್ಷೆಯನ್ನು ಕೈಬಿಡಲಾಗಿದೆ. ಆದರೆ ಮೂರು ತರಗತಿಗಳ ಅರ್ಧ ವಾರ್ಷಿಕ ಪರೀಕ್ಷೆ ಲಿತಾಂಶ ಪ್ರಕಟಿಸುವುದಕ್ಕೆ ಅನುಮತಿ ನೀಡಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದು, ಒಪ್ಪಿಗೆ ನೀಡಿದ ತಕ್ಷಣ ಪ್ರಕಟಿಸುವೆವು ಎಂದು ಮಧು ಬಂಗರಾಪ್ಪ ಹೇಳಿದರು.
ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ
ಮುಡಾ, ವಕ್ಫ್ ಆಯಿತು ಈಗ ಬಿಪಿಎಲ್ ಕಾರ್ಡ್ ಬಗ್ಗೆ ಅಪಪ್ರಚಾರ ನಡೆಸಿರುವ ಪ್ರತಿಪಕ್ಷ ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ. ಅರ್ಹ ಬಡವರ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಕ್ಷೇತ್ರದ ಜನರು ಶಾಸಕರ ಗಮನಕ್ಕೆ ತಂದೇ ತರುತ್ತಾರೆ. ನಮ್ಮ ಕ್ಷೇತ್ರದ ಜನರಿಂದ ಅಂತಹ ಯಾವುದೇ ದೂರುಗಳು ಬಂದಿಲ್ಲ.
ಅನರ್ಹರ ಬಿಪಿಎಲ್ ಕಾರ್ಡ್ ಮಾತ್ರ ರದ್ದುಪಡಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಈಗಾಗಲೇ ಹೇಳಿದ್ದರೂ ಬಿಜೆಪಿಯವರು ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ದೂರಿದರು.
ಪಕ್ಷದ ಶಾಸಕರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿರುವುದು, ಬಯಸುವುದು ತಪ್ಪಲ್ಲ. ಸಚಿವ ಸಂಪುಟ ಪುನಾರಚನೆ ವಿಚಾರ ಗೊತ್ತಿಲ್ಲ, ಅದನ್ನೆಲ್ಲ ನಾಯಕರು ನೋಡಿಕೊಳ್ಳುತ್ತಾರೆ ಎಂದು ಮಧು ಬಂಗಾರಪ್ಪ ಪ್ರತಿಕ್ರಿಯಿಸಿದರು.