

ಇಂದು ಮಕ್ಕಳ ರಂಗಭೂಮಿ ಹಾಗೂ ಶಿಕ್ಷಣದಲ್ಲಿನ ರಂಗಭೂಮಿಯಲ್ಲಿ ಕೆಲಸ ಮಾಡಲು ಬೆಟ್ಟದಷ್ಟಿದೆ. ದೂರದೃಷ್ಟಿಯಿಂದ ಇದನ್ನೆಲ್ಲಾ ಮಾಡಬೇಕಿದೆ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ತಿಳಿಸಿದರು.
ನಗರದ ಕಿರುರಂಗ ಮಂದಿರದ ಆವರಣದಲ್ಲಿ ನಿರ್ದಿಗಂತ ರಂಗ ಸಂಸ್ಥೆ ಶನಿವಾರ ಆಯೋಜಿಸಿದ್ದ ಶಾಲಾ ಮಕ್ಕಳ ರಂಗಹಬ್ಬ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ನಿರ್ದಿಗಂತ ಇಂದು 110 ಶಾಲೆಗಳನ್ನು ತಲುಪಿಸಿದೆ. ಆದರೆ, ತಲುಪಬೇಕಿರುವ ಶಾಲೆಗಳು ಸಾಕಷ್ಟಿದೆ. ಎದೆಗುಂದದೆ ನಾವು ಮಾಡಿದರೆ ಸರಕಾರ ಹಾಗೂ ಸಂಘಸಂಸ್ಥೆಗಳಿಗೆ ಇದು ಅರ್ಥವಾಗುತ್ತದೆ ಎಂದರು.
ಮಕ್ಕಳೇ ಇಂದು ನಮಗೆ ಪಾಠ ಮಾಡುತ್ತಿದ್ದಾರೆ. ಈ ಮಕ್ಕಳಿಂದ ನಾವು ಕಲಿಯುವುದು ಸಾಕಷ್ಟಿದೆ. ಈ ತಿಂಗಳ ಅಂತ್ಯದಲ್ಲಿ 17 ಜನ ರಂಗಕರ್ಮಿಗಳು ನಮ್ಮನ್ನು ಒಳಗೊಳ್ಳುತ್ತಾರೆ. ನಾವು ಏನು ಮಾಡಬೇಕು ಎಂಬುದನ್ನು ಚರ್ಚೆ ಮಾಡುತ್ತಾರೆ. ಉಡೊ ಮಾತು ಸಾಕು. ದ್ವೀಪಗಳಂತೆ ನಿಂತಿಕೊಳ್ಳಲು ನನಗೆ ಆಗುವುದಿಲ್ಲ ಎಂದು ಆಶಿಸಿದರು.
ಮಕ್ಕಳಿಗೆ ನಾವು ಪಾಠ ಮಾಡಬಾರದು. ಯಾವ ರೀತಿ ಗ್ರಹಿಸಬೇಕು ಎಂಬುದನ್ನು ತಿಳಿ ಹೇಳಬೇಕು. ಕಳೆದ ಒಂದೂವರೆ ವರ್ಷದಿಂದ ನಿರ್ದಿಗಂತ ರೂಪುಗೊಳ್ಳುತ್ತಿದೆ ಎಂದರು. ಮಕ್ಕಳ ಧ್ವನಿ ಏರಿಳಿತ, ನಾಯಕತ್ವ ಗುಣ, ಶುದ್ಧ ಉಚ್ಚಾರಣೆ, ಓದುವ ಕ್ರಮ ಹಾಗೂ ಇತರರೊಂದಿಗೆ ಬೆರೆಯುವ ಗುಣ ಎಲ್ಲವನ್ನೂ ರಂಗಭೂಮಿ ಕಲಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳಲ್ಲಿರುವ ಕೀಳರಿಮೆ ಹೋಗಲಾಡಿಸುತ್ತದೆ. ಕೆಲವರು ಸರ್ಕಾರದ ಹಣವನ್ನು ನಿರ್ದಿಗಂತ ದೋಚುತ್ತಿದೆ ಎಂದು ಕುಟುಕಿದ್ದರು. ಆದರೆ, ನಾವು ಅದಕ್ಕೆ ಉತ್ತರಿಸುವ ಗೋಜಿಗೆ ಹೋಗದೆ ವೌನವಾಗಿದ್ದೆವು. ಕಾರಣ ಕೆಲಸದ ಮೂಲಕ ನಾವು ಇದಕ್ಕೆಲ್ಲಾ ಉತ್ತರ ನೀಡಲು ನಿರ್ಧರಿಸಿದ್ದೇವು ಎಂದು ಹೇಳಿದರು.
ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮಾತನಾಡಿ, ಕುಟುಂಬದ ಕೇಂದ್ರಬಿಂದು ಮಕ್ಕಳೇ ಆಗಿದ್ದರೂ ಇಂದು ಮಕ್ಕಳನ್ನು ನಿರ್ಲಕ್ಷ್ಮಿಸುವ ಸಂಗತಿಗಳು ಹೆಚ್ಚಾಗುತ್ತಿದೆ. ಮಕ್ಕಳು ಕೂಡ ಸಮಾಜದ ಒಂದು ಭಾಗ. ಹಾಗಾಗಿ ಮಕ್ಕಳು ನೋಡಿವ ಪ್ರಪಂಚವನ್ನು ನಾವೆಲ್ಲರೂ ಗ್ರಹಿಸಬೇಕು. ಈ ನಿಟ್ಟಿನಲ್ಲಿ ನಿರ್ದಿಗಂತ ಕಾರ್ಯ ಸ್ವಾಗತಾರ್ಹ ಎಂದು ತಿಳಿಸಿದರು.
ಚಿಂತಕ ಪ್ರೊ.ತುಕಾರಂ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ, ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಚಿಂತಕ ಡಾ. ದೇವನೂರು ಬಸವರಾಜು, ಪತ್ರಕರ್ತ ಕೆ.ದೀಪಕ್, ಪ್ರಾಧ್ಯಾಪಕ ಪ್ರಸನ್ನ ಕೆರಗೋಡು ಇತರರಿದ್ದರು.