ವಿರಾಜಪೇಟೆ: ವಿರಾಜಪೇಟೆ ಪುರಸಭೆಯ ಮೀನುಪೇಟೆಯ ಹಿಂದು ರುದ್ರಭೂಮಿಗೆ ಹಿಂದು ಮಲೆಯಾಳಿ ಅಸೋಸಿಯೇಷನ್ ವತಿಯಿಂದ ಎಲ್ಲ ಸಮುದಾಯದ ದಾನಿಗಳಿಂದ ಸಂಗ್ರಹಿಸಿದ 70 ಸಾವಿರ ರೂ. ವೆಚ್ಚದ ಶವ ಸಾಗಿಸುವ ಸ್ಟ್ರೆಚರ್, ಸ್ನಾನ ಮಾಡಿಸುವ ಟೇಬಲ್, ಆ ಸಂದರ್ಭದಲ್ಲಿ ಬಳಸುವ ಟೆಂಟ್ ನೀಡಲಾಯಿತು.
ಅಸೋಸಿಯೇಷನ್ ಅಧ್ಯಕ್ಷ ವಿನೋಪ್‌ಕುಮಾರ್ ಮಾತನಾಡಿ, ಶವ ಸಂಸ್ಕಾರಕ್ಕೆ ಸೂಕ್ತ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ಪರಿತಪಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸೇವೆಗೆ ಈ ಪರಿಕರಗಳನ್ನು ನೀಡಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಹಿಂದು ಮಲೆಯಾಳಿ ಅಸೋಸಿಯೇಷನ್ ಅಸ್ತಿತ್ವಕ್ಕೆ ಬಂದು 15 ವರ್ಷಗಳು ಕಳೆದಿವೆ. ವಿವಿಧ ಜನಪರ ಸಮಾಜ ಸೇವೆಯಲ್ಲಿ ತೊಡಗಿದ್ದೇವೆ ಎಂದರು.
ಮೀನುಪೇಟೆಯ ಹಿಂದು ರುದ್ರಭೂಮಿ ಸುಮಾರು ಒಂದು ಎಕರೆ ಜಾಗದಲ್ಲಿದೆ. ಇಲ್ಲಿನ ಅವ್ಯವಸ್ಥೆಯನ್ನು ನೋಡಿದರೆ ಪುರಸಭೆ ಇದೆಯೋ, ಇಲ್ಲವೋ ಎಂಬಂತೆ ಭಾಸವಾಗುತ್ತದೆ. ಇಲ್ಲಿಗೆ ವಿರಾಜಪೇಟೆ ತಾಲೂಕಿನಾದ್ಯಂತ ಶವಗಳನ್ನು ತಂದು ಸಂಸ್ಕಾರ ಮಾಡಲಾಗುತ್ತದೆ. ಆದರೆ ಮೂಲ ಸೌಕರ್ಯಗಳೇ ಇಲ್ಲ. ಶವ ಇಡಲು ನಿರ್ಮಾಣ ಮಾಡಿರುವ ಕೊಠಡಿ ಪುಂಡ ಪೋಕರಿಗಳ ತಾಣವಾಗಿದೆ. ನೀರಿಗಾಗಿ ನಿರ್ಮಾಣ ಮಾಡಿರುವ ಟ್ಯಾಂಕ್ ನೀರಿಲ್ಲದೆ ಒಣಗುತ್ತಿದೆ. ಹೈಮಾಸ್ಟ್ ಲೈಟ್ ಬೆಳಗುತ್ತಿಲ್ಲ. ರಾತ್ರಿ ಬಂದ ಶವಗಳನ್ನು ಮೊಬೈಲ್ ಲೈಟ್‌ಗಳ ಸಹಾಯದಿಂದ ಸಂಸ್ಕಾರ ಮಾಡಲಾಗುತ್ತಿದೆ. ಸುತ್ತಲು ಕಾಡು ಬೆಳೆದುಕೊಂಡು ಎಲ್ಲಿ ಸಂಸ್ಕಾರ ಮಾಡುವುದೆಂದು ತಿಳಿಯುತ್ತಿಲ್ಲ. ಶವವನ್ನು ಸುಡಲು ಇರುವ 2 ಸಿಲಿಕಾನ್ ಚಿತಾಗಾರದಲ್ಲಿ ಒಂದು ಕೆಟ್ಟು ಹೋಗಿದೆ. ಧರ್ಮಸ್ಥಳ ಸಂಸ್ಥೆ ನೀಡಿರುವ ಸಿಲಕಾನ್ ಚಿತಾಗಾರದ ಸಿಲಿಕಾನ್ ಕಬ್ಬಿಣವನ್ನು ಕಳ್ಳರು ಹೊತ್ತೊಯ್ದಿದ್ದಾರೆ ಎಂದು ತಿಳಿಸಿದರು.
ಸ್ಮಶಾನವನ್ನು ಪುರಸಭೆ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಇಲ್ಲಿ ಶವ ಸಂಸ್ಕಾರಕ್ಕೆ ಬರುವವರು ನರಕಯಾತನೆ ಅನುಭವಿಸುತ್ತಿದ್ದಾರೆ. ಸ್ಮಶಾನ ನಿರ್ವಹಣೆಯನ್ನು ನಮ್ಮ ಸಂಸ್ಥೆಗೆ ನೀಡಿದರೆ ಉತ್ತಮವಾಗಿ ನಿರ್ವಹಿಸುತ್ತೇವೆ. ಇಲ್ಲವಾದರೆ ನಾವು ದಾನಿಗಳಿಂದ ಹಣ ಪಡೆದು ಖರೀದಿಸಿರುವ ಶವ ಸಾಗಿಸುವ ಸ್ಟ್ರೆಚರ್, ಸ್ನಾನ ಮಾಡಿಸುವ ಟೇಬಲ್, ಶವ ಸ್ನಾನ ಮಾಡಿಸಲು ಬಳಸುವ ಟೆಂಟ್ ಇಡಲು ಒಂದು ಕೋಣೆಯನ್ನಾದರೂ ಒದಗಿಸಿ ಕೊಡಲಿ ಎಂದು ಹೇಳಿದರು. ಉಪಾಧ್ಯಕ್ಷ ದಿನೇಶ್ ಕುಮಾರ್, ಕಾರ್ಯದರ್ಶಿ ಶಾಜು ಮೋನು, ಖಜಾಂಚಿ ಸುನೀಲ್ ಕುಮಾರ್, ಸಲಹೆಗಾರ ಸುರೇಶ್‌ಕುಮಾರ್ ಮತ್ತಿತರರು ಹಾಜರಿದ್ದರು.