ಶರಣರ ಬೆಟ್ಟದ ಗೀರು ಚಿತ್ರಗಳಿಗೆ ಬೇಕಿದೆ ರಕ್ಷಣೆ

Gudekotee
ಗುಡೇಕೋಟೆ ಹೋಬಳಿಯ ಶರಣರ ಬೆಟ್ಟದಲ್ಲಿರುವ ಗೀರುಚಿತ್ರಗಳು.
Published on

ಕೂಡ್ಲಿಗಿ: ಗುಡೇಕೋಟೆ ಹೋಬಳಿಯ ಪೂರ್ವಕ್ಕೆ 35 ಕಿಮೀ ದೂರ, ದೇವರಹಟ್ಟಿ ಮತ್ತು ಹಾಲಸಾಗರ ಗ್ರಾಮಗಳ ಸಮೀಪದಲ್ಲಿರುವ ಶರಣರ ಬೆಟ್ಟ ಪ್ರಾಗೈತಿಹಾಸಿಕ ನೆಲೆ ಬೀಡಾಗಿದೆ. ಆದರೆ, ಸೂಕ್ತ ಸಂರಕ್ಷಣೆ, ಪ್ರಚಾರವಿಲ್ಲದ ಕಾರಣ ಬೆಳಕಿಗೆ ಬಾರದೇ ಉಳಿದಿದೆ.

ಇದು ಏಕಶಿಲಾ ಬೆಟ್ಟದಂತೆ ಗೋಚರಿಸುತ್ತಿದ್ದು, ಇಲ್ಲಿ ನೈಸರ್ಗಿಕವಾಗಿ ಕಲ್ಲಾಸರೆಗಳು, ಗವಿ, ಬಯಲು ಬಂಡೆ, ನೀರಿನ ದೋಣಿಗಳಿಂದ ಸದಾ ಕಂಗೊಳಿಸುತ್ತಿದೆ. ಇಲ್ಲಿ ಹಿಂದೆ ಶರಣರು ವಾಸಿಸುತ್ತಿದ್ದರಿಂದ ಶರಣರ ಬೆಟ್ಟ ಎಂದು ಕರೆಯಲಾಗುತ್ತಿದೆ ಎಂಬ ಪ್ರತೀತಿ ಇದೆ. ಬೆಟ್ಟದ ಮಧ್ಯದ ಬಯಲು ಬಂಡೆ ಮೇಲೆ ಗೀರು ಚಿತ್ರಗಳಿರುವುದರಿಂದ ನೂತನ ಮತ್ತು ಬೃಹತ್ ಶಿಲಾಯುಗದ ಜನರು ಕ್ರಿ.ಪೂ.1200 ರಲ್ಲಿ ವಾಸಿಸುತ್ತಿದ್ದರು ಎಂಬುದನ್ನು ಸೂಚಿಸುತ್ತದೆ.

ಕಲ್ಮನೆ ಸಮಾಧಿಗಳು, ಸಾಕಿದ ಹಾಗೂ ಕಾಡು ಪ್ರಾಣಿಗಳನ್ನು ಬಯಲು ಬಂಡೆಗಳ ಮೇಲೆ ಚಿತ್ರಗಳನ್ನು ಗೀಚಿದ್ದಾರೆ. ಈ ಗೀರು ಚಿತ್ರಗಳನ್ನು ಪ್ರಾಗೈತಿಹಾಸಿಕ ತಜ್ಞರಾದ ಎಂ.ಎಸ್. ನಾಗರಾಜ್ ರಾವ್, ರು.ಮ. ಷಡಕ್ಷರಯ್ಯ ಅವರು ಸ್ಥಳೀಯರ ಸಹಕಾರದೊಂದಿಗೆ ಸಂಶೋಧಿಸಿ ಬೆಳಕಿಗೆ ತಂದಿದ್ದು, ಗೀರು ಬಂಡೆ ಚಿತ್ರ ಎಂದು ಕರೆದಿದ್ದಾರೆ. ಗೂಳಿಗಳು, ಜಿಂಕೆಗಳು, ಶಂಖುಹುಳ, ಏಣಿ, ಪಾದಗಳ ಗೀರು ಚಿತ್ರಗಳು ಇಲ್ಲಿ ಕಾಣಬಹುದು. ಈ ತರಹ ಗೀರು ಚಿತ್ರಗಳು ಬೃಹತ್ ಶಿಲಾಯುಗ, ಆದಿ ಮಧ್ಯಭಾಗದವು ಎನ್ನುತ್ತದೆ ಚರಿತ್ರೆ.

ಜನರಿಂದ ಗುಹೆಯ ದರ್ಶನ

ಗೀರುಚಿತ್ರಗಳನ್ನು ಸ್ಥಳೀಯರು ಹಾಗೂ ಸುತ್ತ್ತಲಿನ ಗ್ರಾಮಸ್ಥರು ಶ್ರಾವಣದಲ್ಲಿ ಪ್ರತಿ ಸೋಮವಾರ ಶರಣರ ಬೆಟ್ಟಕ್ಕೆ ಬಂದು ಗುಹೆಯ ದರ್ಶನ ಮಾಡುವುದು ಸಾಮಾನ್ಯವಾಗಿದೆ. ಅಲ್ಲದೆ ಮ್ಯಾಸ ಬುಡಕಟ್ಟು ಸಮುದಾಯದವರು ಶರಣರ ಬೆಟ್ಟವನ್ನು ಹಾಗೂ ಅಲ್ಲಿರುವ ಗೀರುಬಂಡೆ ಚಿತ್ರ, ಗವಿ, ನೀರಿನ ಹೊಂಡಗಳನ್ನು ಅತ್ಯಂತ ಪವಿತ್ರವೆಂದ ಭಾವಿಸಿ ಪೂಜಿಸುತ್ತಾರೆ.

ದಕ್ಷಿಣ ಭಾರತದಲ್ಲಿರುವ ಮೊದಲನೆ ಗೀರುಬಂಡೆ ಚಿತ್ರ ಬಳ್ಳಾರಿಯ ಸಂಗನ ಕಲ್ಲಿನಲ್ಲಿದ್ದು, ಎರಡನೇ ಚಿತ್ರವನ್ನು ಇಲ್ಲಿ ಕಾಣಬಹುದು. ಪ್ರಾಗೈತಿಹಾಸಿಕ ತಾಣವಾಗಿರುವ ಈ ಶರಣರ ಬೆಟ್ಟವನ್ನು ಪುರಾತತ್ವ ಇಲಾಖೆ ಗಮನಹರಿಸಿ ಸಂರಕ್ಷಣೆ ಮಾಡಬೇಕು. ಪ್ರವಾಸಿ ತಾಣವಾಗಿ ಸರ್ಕಾರ ಘೋಷಿಸಿದರೆ, ಇತಿಹಾಸ ತಜ್ಞರು ಇನ್ನೂ ಹೆಚ್ಚಿನ ಸಂಶೋಧನೆ ಮಾಡಲು ಅನುಕೂಲವಾಗಲಿದೆ.ನಾಗರಾಜ್ ಕೊಟ್ರಪ್ಪನವರ,ಉಪನ್ಯಾಸಕ, ಗುಡೇಕೋಟೆ

ಐತಿಹಾಸಿಕ ಪರಂಪರೆ ಹೊಂದಿರುವ ಗುಡೇಕೋಟೆಯನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ ಸಾರ್ವಜನಿಕರ ವೀಕ್ಷಣೆಗೆ ಒತ್ತುವಂತೆ ಪುರಾತತ್ವ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಶರಣರ ಬೆಟ್ಟ, ಎಣ್ಣೀರಪ್ಪನ ಬಾವಿ, ಪಂಚಲಿಂಗೇಶ್ವರ ಸ್ಥಳ ಅಭಿವೃದ್ಧಿಗೊಳ್ಳಬೇಕಿದೆ. ಐತಿಹಾಸಿಕ ಕುರುಹುಗಳಿಗೆ ಧಕ್ಕೆ ಆಗದಂತೆ ಸರ್ಕಾರ ರಕ್ಷಣೆ ಮಾಡಬೇಕು.ಡಾ.ಎಂ.ರಾಜಣ್ಣ.ಪ್ರಾಚಾರ್ಯ, ಗುಡೇಕೋಟೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net