ಶರಣರ ತತ್ವ ಚಿಂತನೆ ಜೀವನದಲ್ಲಿ ಅಳವಡಿಸಿಕೊಳ್ಳಿ

ಹುಣಸೂರು ನಗರದ ಛಾಯಾದೇವಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭವನ್ನು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಉದ್ಘಾಟಿಸಿದರು. ಮೋದೂರು ಮಹೇಶಾರಾಧ್ಯ, ಡಾ.ಬಸವರಾಜು, ಕುಮಾರ್ ಅರಸೇಗೌಡ ಇತರರಿದ್ದರು.
HUN-AUG-26-1(SHARANA SAHITYA PARISHATH)
Published on

ಹುಣಸೂರು: ಶರಣರ ತತ್ವಗಳ ಚಿಂತನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಧನೆಯ ಶಿಖರವನ್ನೇರಲು ಸಾಧ್ಯ ಎಂದು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸಾಂಬಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.


ತಾಲೂಕು ಶರಣ ಸಾಹಿತ್ಯ ಪರಿಷತ್, ಛಾಯಾದೇವಿ ಬಿಎಡ್ ಕಾಲೇಜು ಮತ್ತು ತಾಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಿದ್ದ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಮಹಾ ಸ್ವಾಮೀಜಿ ಅವರ ಜಯಂತಿ ಮತ್ತು ಶರಣ ಸಾಹಿತ್ಯ ಪರಿಷತ್ ಸಂಸ್ಥಾಪನಾ ದಿನಾಚರಣೆ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.


ಶರಣರಿಗೆ ನವಚೈತನ್ಯ ನೀಡಿದ ರಾಜೇಂದ್ರ ಸ್ವಾಮಿಗಳು ಅರ್ಥಪೂರ್ಣ ಜೀವನ ನಡೆಸಿದರು. ಅನ್ನ ಮತ್ತು ಅಕ್ಷರ ದಾಸೋಹವನ್ನು ಆರಂಭಿಸುವ ಮೂಲಕ ಶರಣ ಜೀವನವನ್ನು ಸಾರ್ಥಕಗೊಳಿಸಿದರು. ಶರಣ ಸಾಹಿತ್ಯಗಳು ವಚನಗಳ ಮೂಲಕ ವಿಶ್ವಾದ್ಯಂತ ಪಸರಿಸಿದ್ದು, 30ಕ್ಕೂ ವಿವಿಧ ಭಾಷೆಗಳಲ್ಲಿ ತರ್ಜುಮೆಗೊಂಡಿರುವುದೇ ವಚನಗಳ ಶ್ರೇಷ್ಠತೆ ತೋರಿಸುತ್ತದೆ. ವಿದ್ಯಾರ್ಥಿಗಳು ಶರಣ ತತ್ವಗಳನ್ನು ಅನುಭವಿಸುವ ಮೂಲಕ ಸಾಧನೆಯ ಶಿಖರದೊಂದಿಗೆ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕೆಂದು ತಿಳಿಸಿದರು.


ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಮೋದೂರು ಮಹೇಶಾರಾಧ್ಯ ಮಾತನಾಡಿ, 1986ರಲ್ಲಿ ಶ್ರೀ ರಾಜೇಂದ್ರ ಮಹಾ ಸ್ವಾಮೀಜಿ ಸ್ಥಾಪಿಸಿದ ಶರಣ ಸಾಹಿತ್ಯ ಪರಿಷತ್‌ನ ಮೂಲ ಉದ್ದೇಶ ಜಾತಿ, ಧರ್ಮ, ಭಾಷೆಯ ಪರಿಧಿಯನ್ನು ಮೀರಿದ ಮಾನವೀಯ ಸೇವೆಯನ್ನು 12ನೇ ಶತಮಾನದ ಕಲ್ಯಾಣ ಕ್ರಾಂತಿ ನೀಡಿದ್ದು, ಅದನ್ನು ಸಮಾಜಕ್ಕೆ ಬಿತ್ತರಿಸುವ ಮೂಲಕ ಪ್ರಸ್ತುತ ಸಮಾಜದಲ್ಲಿನ ಪ್ರಕ್ಷುಬ್ಧತೆ, ಅಪ್ರಾಮಾಣಿಕತೆ ಮತ್ತು ಜಾತೀಯತೆಗಳನ್ನು ಕಿತ್ತೊಗೆಯಲು ಹೆಜ್ಜೆ ಇಡುವುದಾಗಿದೆ ಎಂದರು.


ಪರಿಷತ್‌ನ ಪ್ರಧಾನ ಕಾರ್ದರ್ಶಿ ರೇಣುಕಾ ಪ್ರಸಾದ್ ಶರಣರ ಸಾಹಿತ್ಯ ಮೌಲ್ಯಗಳು ಕುರಿತಾಗಿ ವಿಶೇಷ ಉಪನ್ಯಾಸ ನೀಡಿ, ಕಾಯಕ, ದಾಸೋಹ ಮತ್ತು ಜಂಗಮ ತತ್ವಗಳೇ ಶರಣರ ತತ್ವಗಳಾಗಿದ್ದು, ಇವುಗಳನ್ನು ಅರ್ಥ ಮಾಡಿಕೊಂಡಲ್ಲಿ ಶರಣರನ್ನು ಶರಣ ಸಾಹಿತ್ಯವನ್ನು ಅರ್ಥ ಮಾಡಿಕೊಂಡಂತೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜು ಮಾತನಾಡಿದರು. ದಿನಾಚರಣೆ ಅಂಗವಾಗಿ ಪ್ರಶಿಕ್ಷಣಾರ್ಥಿಗಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪತ್ರಕರ್ತ ಶಿವಕುಮಾರ್.ವಿ.ರಾವ್ ಬಹುಮಾನಗಳನ್ನು ವಿತರಿಸಿದರು. ರಂಗಕಲಾವಿದ ಕುಮಾರ್ ಅರಸೇಗೌಡ, ಪ್ರಾಧ್ಯಾಪಕರಾದ ಚಂದ್ರು, ಬಸವರಾಜ ಕುಂಬಾರ್ ಮತ್ತು ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net