ಶರಣ ಸಾಹಿತ್ಯ ಸಮ್ಮೇಳನಕ್ಕೆ ಮುರುಘಾಮಠದಿಂದ ಸಹಕಾರ

ctd----02
Published on

ಚಿತ್ರದುರ್ಗ: ನಗರದಲ್ಲಿ ಮುಂಬರುವ ಜ.18,19ರಂದು ನಡೆಸಲುದ್ದೇಶಿಸಿರುವ ಅಖಿಲ ಭಾರತ 13ನೇ ಶರಣ ಸಾಹಿತ್ಯ ಸಮ್ಮೇಳನಕ್ಕೆ ಸಹಕಾರ ನೀಡುವ ಮೂಲಕ ಮುರುಘಾಮಠ ಸಂಪೂರ್ಣ ತೊಡಗಿಸಿಕೊಳ್ಳಲಿದೆ ಎಂದು ಬೃಹನ್ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯ ಡಾ. ಬಸವಕುಮಾರ ಸ್ವಾಮೀಜಿ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಸಹಯೋಗದಲ್ಲಿ ಮುರುಘಾಮಠದ ಅನುಭವ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶರಣ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ವಚನ ಸಾಹಿತ್ಯವನ್ನು ನಾಡಿನ ಉದ್ದಗಲಕ್ಕೂ ಪ್ರಸಾರ ಮಾಡುವ ಉದ್ದೇಶದಿಂದ ಸುತ್ತೂರಿನ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅವರಿಂದ ಶರಣ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿದ್ದು, ಸಮ್ಮೇಳನದ ಮೂಲಕ ವಚನಗಳ ಸಾರ ಜನಮನ ತಲುಪಲಿ ಎಂಬ ಆಶಿಸಿದರು.

ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಚಿತ್ರದುರ್ಗದಲ್ಲಿ ನಡೆಯುವ ಸಮ್ಮೇಳನಕ್ಕೆ ಶ್ರೀಮಠ ಎಲ್ಲ ರೀತಿಯ ಸಹಕಾರ ನೀಡಲಿದೆ. ಅಲ್ಲದೆ ಸಮ್ಮೇಳನದಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ಮತ್ತೆ ಹೋರಾಟಕ್ಕೆ ಚಾಲನೆ ದೊರೆಯುವಂತಾಗಲಿ ಎಂದು ಆಶಿಸಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ.ಸಿ. ಸೋಮಶೇಖರ್, ಡಾ. ಸಿದ್ದರಾಮ ಶರಣರು ಬೆಲ್ದಾಳ ಅವರ ಸರ್ವಾಧ್ಯಕ್ಷತೆಯಲ್ಲಿ ಎರಡು ದಿನಗಳ ಕಾಲ ನಡೆಯುವ ಶರಣ ಸಾಹಿತ್ಯ ಸಮ್ಮೇಳನದಲ್ಲಿ ವಚನ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ, ವೈಚಾರಿಕತೆ ಹಾಗೂ ಪ್ರಗತಿಪರ ಚಿಂತನ ಗೋಷ್ಠಿಗಳು ನಡೆಯಲಿವೆ. ಶರಣರ ವಿಚಾರಗಳನ್ನು ಕುರಿತಾದ ನಾಟಕ ಪ್ರದರ್ಶನ, ಇತ್ಯಾದಿ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶವಿದೆ ಎಂದು ತಿಳಿಸಿದರು.

ಇತಿಹಾಸ ಸಂಶೋಧಕ ಡಾ. ಬಿ.ರಾಜಶೇಖರಪ್ಪ ಮಾತನಾಡಿ, ಸಮ್ಮೇಳನದಲ್ಲಿ ಶರಣರ ವಿಚಾರಧಾರೆಗಳ ಮೇಲೆ ಬೆಳಕು ಚೆಲ್ಲುವ ಸ್ಮರಣ ಸಂಚಿಕೆ ಹೊರತರಲಾಗುವುದು ಎಂದು ಹೇಳಿದರು.

ಚಿಂತಕರಾದ ಡಾ. ಬಸವರಾಜ್ ನೆಲ್ಲಿಸರ, ನಾಗರಾಜ್ ಸಂಗಮ್, ಆನಂದಕುಮಾರ್, ನಗರಭೆ ಮಾಜಿ ಅಧ್ಯಕ್ಷೆ ದೇವಿಕುಮಾರಿ ಮತ್ತಿತರರು ಸಲಹೆ ನೀಡಿದರು.

ಗುರುಮಿಟ್‌ಕಲ್ನ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ತುಮಕೂರಿನ ಬಸವ ಮಹಲಿಂಗ ಸ್ವಾಮೀಜಿ, ಶಿರಸಿ ಹಾಗೂ ಚಿದ್ರಳ್ಳಿಯ ಮಲ್ಲಿಕಾರ್ಜುನ ಸ್ವಾಮೀಜಿ, ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ, ಮುರುಘರಾಜೇಂದ್ರ ಮಠದ ಮುರುಘೇಂದ್ರ ಸ್ವಾಮೀಜಿ ಸಮ್ಮುಖ ವಹಿಸಿದ್ದರು.

ವಿವಿಧ ಜಿಲ್ಲೆಗಳ ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾದ ಅಶೋಕ್ ಮಳಲಿ, ಪ್ರಕಾಶ ಅಂಗಡಿ, ಸಿದ್ದಪ್ಪ ಹೊಟ್ಟಿ, ಜಗನ್ನಾಥಪ್ಪ ಪನಸಾಲಿ, ಸೋಮಶೇಖರ್ ಗಾಂಜ, ಮಲ್ಲಿಕಾರ್ಜುನ ಕಲಬುರ್ಗಿ, ಪುಷ್ಪ ಸುರೇಶ್‌ಬಾಬು, ಎಸ್. ಷಣ್ಮುಖಪ್ಪ ಇತರರು ಇದ್ದರು.

ಶಸಾಪ ಜಿಲ್ಲಾಧ್ಯಕ್ಷ ಡಾ. ಕೆ.ಎಂ. ವೀರೇಶ್ ಸ್ವಾಗತಿಸಿದರು. ಹುರುಳಿ ಬಸವರಾಜ ನಿರೂಪಿಸಿದರು, ಕೆ.ಪಿ.ಎಂ ಗಣೇಶಯ್ಯ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net