ಶರಣ ಸಾಹಿತ್ಯ ಜಾತಿಗೆ ಸೀಮಿತವಲ್ಲ

05 TKE 1 kasapa
ತರೀಕೆರೆಯಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ಬೆಳಕು ಉಪನ್ಯಾಸ ಮಾಲಿಕೆ ಕಾರ್ಯಕ್ರಮವನ್ನು ಪ್ರಾಧ್ಯಾಪಕಿ ಭಾಗ್ಯಾ ಉದ್ಘಾಟಿಸಿದರು. ಟಿ.ದಾದಾಪೀರ್, ರವಿ ದಳವಾಯಿ, ಟಿ.ಎಂ.ಬೋಜರಾಜ್, ಎಚ್.ಟಿ.ತಿಪ್ಪೇಶಪ್ಪ ಇತರರಿದ್ದರು.
Published on

ತರೀಕೆರೆ: ಉತ್ತರ ಭಾರತ ಮತ್ತು ಆಫ್ಘಾನಿಸ್ತಾನದಿಂದ ಶರಣ ತತ್ವ ಒಪ್ಪಿ ಬಂದಂಥವರು ಕನ್ನಡ ಭಾಷೆಯನ್ನು ಕಲಿತು ಕನ್ನಡದಲ್ಲೇ ಸರಳ ವಚನ ರಚಿಸಿದ್ದಾರೆ ಎಂದು ಬೀರೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಧ್ಯಾಪಕಿ ಭಾಗ್ಯಾ ಹೇಳಿದರು.

ಪಟ್ಟಣದ ಮನೆಯೊಂದರಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ಬೆಳಕು ಉಪನ್ಯಾಸ ಮಾಲಿಕೆ ಮತ್ತು ಕನ್ನಡ ಭಾಷೆಗೆ ವಚನ ಸಾಹಿತ್ಯದ ಕೊಡುಗೆ ವಿಷಯ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶರಣ ಸಂಸ್ಕೃತಿ ಅಯ್ಯ ಮತ್ತು ಅಕ್ಕ ಎಂಬ ಪದ ಪ್ರಯೋಗವನ್ನು ಮೊದಲ ಬಾರಿಗೆ ಹುಟ್ಟು ಹಾಕಿದ್ದು, ಮೋಳಿಗೆ ಮಾರಯ್ಯರಂಥ ಅನೇಕ ಶರಣರು ಬಸವಣ್ಣನವರ ಜತೆಗೂಡಿ ಶರಣ ತತ್ವ ನಾಡಿನಾದ್ಯಂತ ಪಸರಿಸಿದರು ಎಂದು ಹೇಳಿದರು.

ಶರಣ ಸಾಹಿತ್ಯ ಯಾವುದೇ ಒಂದು ಜಾತಿ ಪಂಗಡಕ್ಕೆ ಸೀಮಿತವಾಗಿಲ್ಲ. ಎಲ್ಲ ವರ್ಗದ ಕಾಯಕ ಜೀವಿಗಳು ಶರಣ ಸಾಹಿತ್ಯವನ್ನು ಕಟ್ಟಿ ಬೆಳೆಸಿದ್ದಾರೆ. ತರೀಕೆರೆ ಪಟ್ಟಣ ಅಕ್ಕ ನಾಗಲಾಂಬಿಕೆ ಹಾಗೂ ನುಲಿಯ ಚಂದಯ್ಯ ಅವರ ಗದ್ದುಗೆಯನ್ನು ಒಳಗೊಂಡಿರುವ ಐತಿಹಾಸಿಕ ಸ್ಥಳ. ತರೀಕೆರೆ ಮೂಲಕವೇ ವಚನ ಸಾಹಿತ್ಯ ರಕ್ಷಿಸುವ ಕೆಲಸವಾಗಬೇಕಿದೆ. ಇಂದಿನ ಸನ್ನಿವೇಶದಲ್ಲಿ ವಚನ ಸಾಹಿತ್ಯದ ಅನಿವಾರ್ಯತೆ ಕನ್ನಡ ನಾಡಿಗೆ ಇದೆ ಎಂದು ತಿಳಿಸಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಟಿ.ದಾದಾಪೀರ್ ಮಾತನಾಡಿ, ಶರಣ ಸಾಹಿತ್ಯ ಪರಿಷತ್ ಮೂಲಕ ಶರಣರ ಬದುಕನ್ನು ಸಮಾಜದ ಎಲ್ಲ ವರ್ಗಗಳಿಗೂ ತಲುಪಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಪುರಸಭೆ ಸದಸ್ಯ ಟಿ.ಎಂ.ಬೋಜರಾಜ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿ ದಳವಾಯಿ, ಕಸಾಪ ಹಿರಿಯ ಸದಸ್ಯ ಬಿ.ಎಸ್.ಭಗವಾನ್, ಶಿಕ್ಷಕರಾದ ಎಚ್.ಟಿ.ತಿಪ್ಪೇಶಪ್ಪ, ಎಂ.ಬಿ.ರಾಮಚಂದ್ರಪ್ಪ, ಅನಂತಪ್ಪ, ವೀರೇಶ ಹಿರೇಮಠ, ಲೇಖಕ ಮೋಹನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net