

ಹುಣಸೂರು: ನಗರದ ಶಕ್ತಿದೇವತೆ ರಾಕಾಸಮ್ಮ ತಾಯಿಯ 49ನೇ ವರ್ಷದ ಎರಡು ದಿನಗಳ ಪೂಜಾ ಮಹೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ನಗರದ ಶಂಕರಮಠ ಮುಖ್ಯರಸ್ತೆಯಲ್ಲಿರುವ ದೇವಾಲಯದಲ್ಲಿ ಪೂಜಾ ಮಹೋತ್ಸವದ ಮೊದಲ ದಿನವಾದ ಗುರುವಾರ ಬೆಳಗ್ಗೆ ತಾಯಿಯ ಉತ್ಸವಮೂರ್ತಿಯನ್ನು ಲಕ್ಷ್ಮಣತೀರ್ಥ ನದಿ ತೀರದ ಬಳಿ ಕೊಂಡೊಯ್ದು ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಧ್ಯಾಹ್ನ 12.30ರ ವೇಳೆಗೆ ಮೆರವಣಿಗೆಯಲ್ಲಿ ನಗರದ ಎಚ್.ಡಿ.ಕೋಟೆ ರಸ್ತೆ, ಜೆಎಲ್‌ಬಿ ರಸ್ತೆ, ಗಣೇಶನ ಗುಡಿ ಬೀದಿ ಮೂಲಕ ದೇವಾಲಯದ ಆವರಣಕ್ಕೆ ತಂದು ಪ್ರತಿಷ್ಠಾಪಿಸಲಾಯಿತು. ದಾರಿಯುದ್ದಕ್ಕೂ ಭಕ್ತರು ದೇವಿಗೆ ಪೂಜೆ ಸಲ್ಲಿಸಿದರು.
ಮೆರವಣಿಗೆಯಲ್ಲಿ ತಮಟೆ, ನಗಾರಿ, ಮಂಗಳವಾದ್ಯ ಸಹಿತ ಜಾನಪದ ಕಲಾತಂಡಗಳು ಪಾಲ್ಗೊಂಡಿದ್ದವು. ದೇವಾಲಯದ ಆಡಳಿತ ಮಂಡಳಿ ಸದಸ್ಯರು ಮತ್ತು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.