ಶಂಕಿತ ಉಗ್ರರನ್ನು ಬಂಧಿಸಿದ್ದ ರಾಜ್ಯಪೊಲೀಸರಿಗೆ ಕೇಂದ್ರದಿಂದ ಪದಕ

Published on

ಬೆಂಗಳೂರು: ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಶಂಕಿತ ಉಗ್ರರನ್ನು ಬಂಧಿಸಿದ್ದ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ವಿಶೇಷ ತಂಡದ ಅಧಿಕಾರಿಗಳಿಗೆ ಕೇಂದ್ರ ಗೃಹ ಸಚಿವಾಲಯದ ‘ಅತ್ಯುತ್ತಮ ತನಿಖಾ ಪದಕ’ ಲಭಿಸಿದೆ.

ಕೇಂದ್ರ ಗೃಹ ಸಚಿವಾಲಯವು ಪ್ರತಿವರ್ಷ ಗಂಭಿರ ಸ್ವರೂಪದ ಅಪರಾಧ ಪ್ರಕರಣಗಳಲ್ಲಿ ಅತ್ಯತ್ತಮ ತನಿಖೆ ಕೈಗೊಂಡ ಪೊಲೀಸರ ಕಾರ್ಯಕ್ಷಮತೆಯನ್ನು ಪರಿಗಣಿಸಿ ಪದಕ ನೀಡುತ್ತದೆ. 2020ನೇ ಸಾಲಿನಲ್ಲಿ ರಾಜ್ಯ ಐಎಸ್‌ಡಿ ವಿಶೇಷ ತಂಡದಲ್ಲಿದ್ದ ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಡಿವೈಎಸ್‌ಪಿಗಳಾದ ಡಿ. ಕುಮಾರ್, ಎಸ್.ಕೆ. ಉಮೇಶ್, ಇನ್‌ಸ್ಪೆಕ್ಟರ್ ಸುಶೀಲಾ, ಪೇದೆಗಳಾದ ವೈ. ಶಂಕರ್ ಹಾಗೂ ಎನ್. ಪ್ರಕಾಶ್ ಅವರು ಪದಕಕ್ಕೆ ಆಯ್ಕೆಯಾಗಿದ್ದಾರೆ.

ಶಂಕಿತ ಉಗ್ರರಾದ ಮೆಹಬೂಬ್ ಪಾಷಾ, ಖ್ವಾಜಾ ಮೊಹಿನುದ್ದೀನ್ ಸೇರಿದಂತೆ 17ಕ್ಕೂ ಹೆಚ್ಚು ಮಂದಿ ಉಗ್ರರು, ಇಸ್ಲಾಮಿಕ್ ಸ್ಟೇಟ್ (ಐಎಸ್) ಹಾಗೂ ಪಾಕಿಸ್ತಾನದ ಕೆಲ ಉಗ್ರ ಸಂಘಟನೆಗಳ ಜೊತೆ ಸಂಪರ್ಕದಲ್ಲಿದ್ದರು. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದರು. ಈ ನಿಟ್ಟಿನಲ್ಲಿಯೇ ಉಗ್ರ ಸಂಘಟನೆಯ ಬಲವರ್ಧನೆಗೆ ಹಾಗೂ ಸದಸ್ಯರಿಗೆ ಶಸಾಸ ತರಬೇತಿ ನೀಡಲು ಮುಂದಾಗಿದ್ದರು.
ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಗುರಪ್ಪನ ಪಾಳ್ಯದ ಮನೆಯೊಂದರಲ್ಲಿ ಶಸಾಸ ಸಂಗ್ರಹಿಸಿಟ್ಟಿದ್ದರು. 2019ರ ಡಿಸೆಂಬರ್‌ನಲ್ಲಿ ಮೊದಲಿಗೆ ತಮಿಳುನಾಡಿನಲ್ಲಿ ಹಿಂದುಪರ ಸಂಘಟನೆಯ ಮುಖಂಡನನ್ನು ಹತ್ಯೆ ಮಾಡಿದ್ದರು. ಬಳಿಕ ಪೊಲೀಸ್ ಇನ್‌ಸ್ಪೆಕ್ಟರ್ ವಿಲ್ಸನ್ ಎಂಬುವರನ್ನು ಹತ್ಯೆ ಮಾಡಿ ವಿಕೃತಿ ಮೆರೆದು, ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದರು. ಈ ಕುರಿತು ಚೆನ್ನೈ ಕ್ರೈಂ ಬ್ರಾಂಚ್ ಪೊಲೀಸರು ಐಎಸ್‌ಡಿ ಜೊತೆ ಮಾಹಿತಿ ಹಂಚಿಕೊಂಡಿದ್ದರು. ಐಎಸ್‌ಡಿಯಲ್ಲಿದ್ದ ಐಜಿಪಿ ಸೌಮೇಂದು ಮುಖರ್ಜಿ ನೇತೃತ್ವದ ಅಧಿಕಾರಿಗಳ ತಂಡ, ಸಿಸಿಬಿ ಜೊತೆಗೂಡಿ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು. ಬೆಂಗಳೂರು, ಚಾಮರಾಜನಗರದ ಗುಂಡ್ಲುಪೇಟೆ, ಕೋಲಾರದಲ್ಲಿ ಶಂಕಿತ ಉಗ್ರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಈ ಕಾರ್ಯಕ್ಷಮತೆಯನ್ನು ಪರಿಗಣಿಸಿ ಪದಕಕ್ಕೆ ಆಯ್ಕೆ ಮಾಡಲಾಗಿದೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net