

ಶಿವಮೊಗ್ಗ: ದಿನನಿತ್ಯ ದೇಹ ದಂಡಿಸಲು ಮ್ಯಾಗ್ನೆಟಿಕ್ ಎಲಿಪ್ಟಿಕಲ್ ಬೈಕ್ (ವ್ಯಾಯಾಮ ಉಪಕರಣ) ಖರೀದಿಸಿದ ಗ್ರಾಹಕಿಯೊಬ್ಬರು ಸಂಸ್ಥೆಯ ವಿರುದ್ಧವೇ ನ್ಯಾಯಾಲಯದ ಮೊರೆ ಹೋಗಿದ್ದು ಅರ್ಜಿದಾರರಿಗೆ ಸರಕಿನ ಹಣ, ನ್ಯಾಯಾಲಯ ಮತ್ತು ಇತರೆ ಖರ್ಚು ಸೇರಿ 52 ಸಾವಿರ ರೂ.ಗಳನ್ನು 45 ದಿನದೊಳಗೆ ಪಾವತಿಸುವಂತೆ ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಆದೇಶಿಸಿದೆ.
ಶಿವಮೊಗ್ಗದ ಜೆ.ಯಶಸ್ವಿನಿ ಅವರು ಇತ್ತೀಚೆಗೆ ಖಾಸಗಿ ಸಂಸ್ಥೆಯೊಂದರಿಂದ 25 ಸಾವಿರ ರೂ. ನೀಡಿ ಸ್ವಂತ ಬಳಕೆಗಾಗಿ ಮ್ಯಾಗ್ನೆಟಿಕ್ ಎಲಿಪ್ಟಿಕಲ್ ಬೈಕ್ ಖರೀದಿಸಿದ್ದರು. ಕೆಲ ದಿನಗಳ ಬಳಿಕ ಯಂತ್ರವು ಕರ್ಕಶ ಶಬ್ದ ಮಾಡಲಾರಂಭಿಸಿತ್ತು. ಸಂಸ್ಥೆ ಗಮನಕ್ಕೆ ತಂದರೂ ಸರಿಪಡಿಸಲಿಲ್ಲ. ಸಂಸ್ಥೆಯ ವ್ಯವಸ್ಥಾಪಕರ ಸಲಹೆ ಮೇರೆಗೆ 20 ಸಾವಿರ ರೂ. ಹೆಚ್ಚುವರಿಯಾಗಿ ಪಾವತಿಸಿ ಮತ್ತೊಂದು ಸುಧಾರಿತ ಬೈಕ್ ಖರೀದಿಸಿದ್ದರು. ಅದು ಕೂಡ ಕೆಲವೇ ದಿನಗಳಲ್ಲಿ ಕರ್ಕಶ ಶಬ್ದ ಮಾಡಲಾರಂಭಿಸಿತ್ತು. ಆದರೆ ಸಂಸ್ಥೆಯವರು ಯಂತ್ರ ಸರಿಪಡಿಸುವಲ್ಲಿ ನಿರ್ಲಕ್ಷೃ ತೋರಿದ್ದಲ್ಲದೆ, ತಮ್ಮ ಹೊಣೆಗಾರಿಕೆ ಇಲ್ಲವೆಂದು ತಿಳಿಸಿದ್ದರು. ಇದರಿಂದ ನೊಂದ ಯಶಸ್ವಿನಿ ಅವರು ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಪೀಠವು ದಾಖಲೆಗಳು, ವಾಸ್ತವಾಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಯಶಸ್ವಿನಿ ಅವರಿಗೆ ಬೈಕ್ ಖರೀದಿ ಮೊತ್ತ 45 ಸಾವಿರ ರೂ., ವಾರ್ಷಿಕ ನಷ್ಟ ಪರಿಹಾರ ಮೊತ್ತ 5 ಸಾವಿರ ರೂ. ಹಾಗೂ ವ್ಯಾಜ್ಯ ಖರ್ಚು 2 ಸಾವಿರ ರೂ. ಗಳನ್ನು ಶೇ.7ರ ಬಡ್ಡಿ ದರ ಸೇರಿಸಿ 45 ದಿನಗಳ ಒಳಗೆ ಹಿಂತಿರುಗಿಸಬೇಕೆಂದು ಆದೇಶಿಸಿದೆ.