

ಶೃಂಗೇರಿ: ಸಜ್ಜನಿಕೆ, ಶಿಸ್ತು, ಸಂಯಮ ಮನೋಭಾವ ರೂಪಿಸುವ ಜೆಸಿಐ ಸಂಸ್ಥೆಯು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿ ಸಮಾಜದ ಉನ್ನತಿಗಾಗಿ ಸ್ಪಂದಿಸುತ್ತಿದೆ ಎಂದು ವಕೀಲ ಸುಧೀರ್‌ಕುಮಾರ್ ಮುರೊಳ್ಳಿ ಹೇಳಿದರು.
ಜೆಸಿಬಿಎಂ ಕಾಲೇಜಿನ ಸಭಾಂಗಣದಲ್ಲಿ ಜೆಸಿಐ ಸಂಸ್ಥೆ ಭಾನುವಾರ ಆಯೋಜಿಸಿದ್ದ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿ, ಭಗವಂತನಲ್ಲಿ ನಂಬಿಕೆ ಇರಿಸಿ ಜಾತಿ, ಪಂಥಗಳನ್ನು ಮೀರಿ ಮಾನವತ್ವದ ಕಡೆ ಹೆಚ್ಚು ಗಮನಹರಿಸಬೇಕು. ಆಗ ಮಾತ್ರ ವ್ಯಕ್ತಿತ್ವ ವಿಕಾಸಗೊಳ್ಳಲು ಸಾಧ್ಯ. ಮನುಷ್ಯತ್ವ ಎಂಬುದು ಎಲ್ಲವನ್ನೂ ಮೀರಿದ ಅತ್ಯದ್ಭುತ ಮೌಲ್ಯ. ಸಮುದಾಯದ ಜತೆ ಪ್ರೀತಿ, ವಿಶ್ವಾಸದಿಂದ ಇರಬೇಕು. ಉತ್ತಮ ಸಂವಾದ ಜಗತ್ತನ್ನು ಒಳಿತು ಮಾಡಲು ಇರಬೇಕು. ಗುಣಾತ್ಮಕವಾದ ನಾಯಕತ್ವ ಸಂಸ್ಥೆ ಮೂಲ ಉದ್ದೇಶವಾಬೇಕು ಎಂದರು.
ವಲಯ 14ರ ನಿಯೋಜಿತ ಉಪಾಧ್ಯಕ್ಷ ಡಾ.ಅಕ್ಷಯ್‌ಕುಮಾರ್ ಮಾತನಾಡಿ, ಜೆಸಿಐ ಸಂಸ್ಥೆ ಸಕಾರಾತ್ಮಕ ವಿವೇಚನೆ ಬೆಳೆಸುತ್ತದೆ. ನಮ್ಮೊಳಗಿನ ಭಾವಾನಾತ್ಮಕ ಸಂಬಂಧಗಳಿಗೆ ಭದ್ರ ಬುನಾದಿ ಹಾಕುವ ಮೂಲಕ ವಿವೇಚನಾಶಕ್ತಿ ಬೆಳೆಯಲು ಪೂರಕವಾಗಿರುತ್ತದೆ. ಜೆಸಿಐ ಸಂಸ್ಥೆ ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸಮಾಜದ ಉನ್ನತಿಗೆ ಶ್ರಮಿಸುತ್ತಿದೆ ಎಂದು ಹೇಳಿದರು.
ಉದ್ಯಮಿ ವಿ.ಎಸ್.ಅಶೋಕ್, ಕಾರ್ಯದರ್ಶಿಯಾಗಿ ಅನ್ವಿತ್‌ಕುಮಾರ್ ಪದವಿ ಸ್ವೀಕರಿಸಿದರು. ಮಾಜಿ ಅಧ್ಯಕ್ಷ ಎಚ್.ಜೆ.ರಾಘವೇಂದ್ರ, ಮಾಜಿ ಕಾರ್ಯದರ್ಶಿ ರಮೇಶ್ ಶೂನ್ಯ, ಕಾರ್ಯಕ್ರಮ ನಿರ್ದೇಶಕ ಚೇತನ್ ಇದ್ದರು.