

ಶಿವಮೊಗ್ಗ: ಮೂಲಸ್ವಭಾವದಿಂದ ಬಂದ ದೋಷಗಳನ್ನು ಗುರುತಿಸಿಕೊಂಡು ತನ್ನನ್ನು ತಾನು ಪರಿಶುದ್ಧವಾಗಿಸಿಕೊಂಡು ಜೀವನದಲ್ಲಿ
ಮುನ್ನಡೆಯುವುದೇ ನಿಜವಾದ ವ್ಯಕ್ತಿತ್ವ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕ ಸು.ರಾಮಣ್ಣ ಹೇಳಿದರು.
ಕರ್ನಾಟಕ ಸಂಘದಲ್ಲಿ ರಾಷ್ಟ್ರೋತ್ಥಾನ ಬಳಗದಿಂದ ರಾಷ್ಟ್ರತಪಸ್ವಿ ಶ್ರೀ ಗುರೂಜಿ ಗ್ರಂಥ ಲೋಕಾರ್ಪಣೆ
ಸಮಾರಂಭದಲ್ಲಿ ಗ್ರಂಥದ ಕುರಿತು ಮಾತನಾಡಿ, ವ್ಯಕ್ತಿತ್ವ ಎಂಬುದು ತೋರ್ಪಡಿಕೆಗೆ ಸೀಮಿತವಾಗಬಾರದು. ಅದು ತನ್ನಲ್ಲಿರುವ
ಅಂತರಂಗವನ್ನು ಹೊರ ಜಗತ್ತಿಗೆ ಪರಿಚಯಿಸಬೇಕು ಎಂದರು.
ವ್ಯಕ್ತಿಯ ನೆನಪು ಸದಾ ಅವಿಸ್ಮರಣೀಯವಾಗಿರಬೇಕು. ಅಳಿಸಲಾಗದ ನೆನಪು ಅದಾಗಿರಬೇಕು. ಕೇವಲ ಸ್ಮರಣೆ ಮತ್ತು ಪ್ರಶಂಸೆಗೆ
ಸೀಮಿತವಾಗಿದೆ ವ್ಯಕ್ತಿಯ ಗುಣಸ್ವಭಾವವನ್ನು ಪ್ರದರ್ಶಿಸಬೇಕು. ಅದಕ್ಕಿಂತ ಮಿಗಿಲಾಗಿ ಜೀವನದಲ್ಲಿ ಮಾಡಿದ ಸಾಧನೆಗಳು
ಇತರರಿಗೆ ಮುಖ್ಯವೆನಿಸಬೇಕು ಎಂದು ಹೇಳಿದರು.
ರಾಷ್ಟ್ರತಪಸ್ವಿ ಗ್ರಂಥದಲ್ಲಿ ಗುರೂಜಿ ಅವರ ಯಾವುದೇ ವೈಭವೀಕರಣ ಮಾಡಿಲ್ಲ. ಅಭಿನಂದಿಸುವ ಪ್ರಯತ್ನವನ್ನೂ ಮಾಡಿಲ್ಲ.
ಪ್ರಶಂಸೆಯೂ ಇಲ್ಲ. ಲೋಕದ ಹಿತಕ್ಕಾಗಿ ಗುರೂಜಿ ಅವರು ಜಾತಿ, ಧರ್ಮವನ್ನು ಮೀರಿ ಕೆಲಸ ಮಾಡಿದ್ದಾರೆ. ಹಾಗಾಗಿಯೇ
ರಾಷ್ಟ್ರತಪಸ್ವಿ ಗ್ರಂಥದಲ್ಲಿ ಅವರ ವ್ಯಕ್ತಿತ್ವ ಅನಾವರಣಗೊಂಡಿದೆ ಎಂದು ಬಣ್ಣಿಸಿದರು.
ರಂಗಹರಿ ಅವರು ಹಿಂದಿಯಲ್ಲಿ 600 ಪುಟಗಳಲ್ಲಿ ಗುರೂಜಿಯವರ ವ್ಯಕ್ತಿತ್ವವನ್ನು ಅನಾವರಣಗೊಳಿಸಿದ್ದಾರೆ. ಅದನ್ನೇ ಚಂದ್ರಶೇಖರ್
ಭಂಡಾರಿ ಅವರು ಒಂದೂವರೆ ವರ್ಷಗಳ ಶ್ರಮವಹಿಸಿ ಕನ್ನಡಕ್ಕೆ 700 ಪುಟಗಳ ಅನುವಾದ ಮಾಡಿದ್ದಾರೆ. ವ್ಯಕ್ತಿಗತ ಸಾಧನೆ
ಮಾಡುವುದು ಬೇರೆ. ಸಮಸ್ಯೆ ಮತ್ತು ದೋಷಗಳನ್ನು ಸರಿಪಡಿಸಿಕೊಂಡು ಲೋಕದ ಹಿತಕ್ಕಾಗಿ ದುಡಿಯಬೇಕು ಎಂಬುದನ್ನು ಗ್ರಂಥದ
ಮೂಲಕ ತೋರಿಸಿಕೊಟ್ಟಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ಡಾ. ಪಿ.ಆರ್.ಸುಧೀಂದ್ರ ಪ್ರಸ್ತಾವಿಕವಾಗಿ ಮಾತನಾಡಿ, ಹಿಂದಿ ಭಾಷೆಯಲ್ಲಿದ್ದ
ರಾಷ್ಟ್ರತಪಸ್ವಿ ಶ್ರೀ ಗುರೂಜಿ ಕೃತಿಯನ್ನು ಕನ್ನಡಕ್ಕೆ ಆರ್‌ಎಸ್‌ಎಸ್ ಕ್ಷೇತ್ರ ಪ್ರಚಾರಕ ಚಂದ್ರಶೇಖರ್ ಭಂಡಾರಿ ಅವರು
ಅನುವಾದಿಸಿದ್ದಾರೆ ಎಂದರು. ಹೊಸದುರ್ಗದ ಭಗೀರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಗ್ರಂಥವನ್ನು ಲೋಕಾರ್ಪಣೆಗೊಳಿಸಿದರು. ಸಾಹಿತಿ ಎಸ್.ಪಿ.ಪದ್ಮಪ್ರಸಾದ್ ಇದ್ದರು.