ವೈದ್ಯ ಲೇಖಕರನ್ನು ಪರಿಚಯಿಸುವ ಕೆಲಸ ಮಾಡಬೇಕು

ವೈದ್ಯ ಲೇಖಕರನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದು ಲೇಖಕ, ಮನೋವೈದ್ಯ ಸಿ.ಆರ್.ಚಂದ್ರಶೇಖರ್ ಹೇಳಿದರು.
33
Published on

ವೈದ್ಯ ಲೇಖಕರನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದು ಲೇಖಕ, ಮನೋವೈದ್ಯ ಸಿ.ಆರ್.ಚಂದ್ರಶೇಖರ್ ಹೇಳಿದರು.

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಿಂದ(ಎಂಎಂಸಿಆರ್‌ಐ) ನಗರದ ಜೆಕೆ ಮೈದಾನದ ಅಮೃತ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಧಮನಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಲ್ಲಿವರೆಗೂ ಕನ್ನಡದಲ್ಲಿ ಸುಮಾರು 150 ಜನರು ವೈದ್ಯ ಸಾಹಿತ್ಯವನ್ನು ರಚಿಸಿರಬಹುದು. ಅವರೆಲ್ಲರ ಬಗ್ಗೆ ಕಿರು ಮಾಹಿತಿಯನ್ನು ಕಲೆಹಾಕುವ ಮೂಲಕ ಇಲ್ಲಿನ ಕನ್ನಡ ಸಂಘವು ವೈದ್ಯ ಲೇಖಕರನ್ನು ಪರಿಚಯಿಸುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ಕನ್ನಡದ ವೈದ್ಯ ಸಾಹಿತ್ಯಕ್ಕೆ ಅನೇಕ ಮಹನೀಯರು ಸೇವೆ ಸಲ್ಲಿಸಿದ್ದಾರೆ. ಡಾ.ಡಿ.ಎಸ್.ಶಿವಪ್ಪ ಅವರ ವೈದ್ಯಕೀಯ ಪದಕೋಶ, ಡಾ.ಪಿ.ಎಸ್.ಶಂಕರ್ ಅವರ ವೈದ್ಯಕೀಯ ವಿಶ್ವಕೋಶ, ಡಾ.ಅನುಪಮಾ ನಿರಂಜನ ಬರೆದಿರುವ ತಾಯಿ ಮತ್ತು ಮಗು ಕೃತಿ, ಡಾ.ಎಸ್.ಜೆ.ನಾಗಲೋಟಿಮಠ ಅವರ ಶ್ರೀಸಾಮಾನ್ಯ ಮತ್ತು ವೈದ್ಯ, ಡಾ.ಲೀಲಾವತಿ ದೇವದಾಸ್ ಅವರ ನಾನು ಗೌರಿಯ ಗರ್ಭಕೋಶ, ಎಚ್.ಡಿ ಚಂದ್ರಪ್ಪ ಗೌಡ ಅವರ ವೈದ್ಯಾಧಿಕಾರಿಯ ಬದುಕು ಮತ್ತು ಬವಣೆ ಕೃತಿ, ಡಾ.ಎಸ್.ಗಿರಿಜಮ್ಮ, ಡಾ.ಸಿ.ಅನ್ನಪೂರ್ಣಮ್ಮ, ಡಾ.ನಾ.ಸೋಮೇಶ್ವರ, ಡಾ.ಅಶೋಕ್ ಪೈ ಅವರ ವಿವಿಧ ಕೃತಿಗಳು ಸ್ಮರಣಾರ್ಹ ಎಂದರು.

ವೈದ್ಯ ವೃತ್ತಿಯಲ್ಲಿ ಡಯಾಗ್ನೋಸಿಸ್, ಚಿಕಿತ್ಸಾ ಕ್ರಮಗಳು ಹೇಗೆ ಮುಖ್ಯವೋ. ಜನರಿಗೆ ಆರೋಗ್ಯ ಶಿಕ್ಷಣ ನೀಡುವುದು ಮುಖ್ಯ. ಕನ್ನಡದಲ್ಲಿ ಸ್ಫುಟವಾಗಿ ಮಾತಾಡುವುದನ್ನು ಕಲಿಯಿರಿ, ಗ್ರಾಮೀಣರ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ. ಎಲ್ಲರೊಂದಿಗೂ ಪ್ರೇಮದಿಂದ ವರ್ತಿಸಿ. ಕನ್ನಡ ಪ್ರೇಮವೂ ಬತ್ತದಿರಲಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮಕ್ಕೂ ಮುನ್ನ ಭುವನೇಶ್ವರಿ ದೇವಿ ರಥೋತ್ಸವ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಎಂಎಂಸಿಆರ್‌ಐ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ, ಪ್ರಾಂಶುಪಾಲ ಪಿ.ಎಲ್.ಬಸವಣ್ಣ, ಕೆ.ಆರ್.ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ.ಶೋಭಾ, ಚೆಲುವಾಂಬ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರ ಕುಮಾರ್, ಪಿಕೆಟಿಬಿ ಆಸ್ಪತ್ರೆ ವೈದ್ಯಕೀಯ ಅಧಿಕ್ಷಕ ಡಾ.ಸಿ.ಪ್ರಶಾಂತ್, ಶಿಕ್ಷಕರ ಸಂಘದ ಅಧ್ಯಕ್ಷೆ ಆರ್.ಸುಧಾ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಎಸ್.ಚಂದ್ರಶೇಖರ್, ಕನ್ನಡ ಸಂಘದ ಅಧ್ಯಕ್ಷೆ ಶುಭಾ ಜಯರಾಂ, ಉಪಾಧ್ಯಕ್ಷ ಡಾ.ಆರ್.ಯೋಗೀಶ್, ಕಾರ್ಯದರ್ಶಿ ಲಿಖಿತ್ ಆರ್.ಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net