ವೃತ್ತಿಪರ ನೇಕಾರರಿಗೂ ಸಹಾಯ ಧನ

11
Published on

ಬೆಳಗಾವಿ: ಗಿರಿಜನ ಉಪಯೋಜನೆ ಮಾದರಿಯಲ್ಲಿ ವೃತ್ತಿಪರ ನೇಕಾರರಿಗೂ ಸಹಾಯ ಧನ ನೀಡುವ ಕುರಿತು ಆರ್ಥಿಕ ಇಲಾಖೆಯೊಂದಿಗೆ ಶೀಘ್ರ
ಚರ್ಚಿಸಿ ಸೂಕ್ತ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ತಾಲೂಕಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ನೇಕಾರರ ಸಮಸ್ಯೆ ಚರ್ಚೆ ಸಭೆಯಲ್ಲಿ ಮಾತನಾಡಿ, ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ವೃತ್ತಿಪರ ಕೂಲಿ ನೇಕಾರರಿಗೂ ವಿವಿಧ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಉದ್ಯಮಗಳಿಗೆ ಅಲ್ಪ ಪ್ರಮಾಣದ ಸೆಸ್ ವಿಧಿಸುವ ಮೂಲಕ ನೆರವು ನೀಡಲಾಗುವುದು. ನೇಕಾರರು ವಾಸಿಸುವ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮ, ಕಾಲನಿಗಳನ್ನಾಗಿ ಪರಿವರ್ತಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸಿಎಂ ಸೂಚಿಸಿದರು.

ನೇಕಾರರ ಉತ್ಪನ್ನಗಳಿಗೆ ಸುಸ್ಥಿರ ಮಾರುಕಟ್ಟೆ, ದರ ಒದಗಿಸಲು ಸರ್ಕಾರ ಪೂರಕ ಕ್ರಮ ಕೈಗೊಳ್ಳಲಿದೆ. ಸರ್ಕಾರದ ವಿವಿಧ ಇಲಾಖೆಗಳಿಗೆ ಅಗತ್ಯವಿರುವ ಬಟ್ಟೆ, ಸೀರೆಗಳನ್ನು ನೇಕಾರರ ಸಾಮರ್ಥ್ಯಕ್ಕೆ ಅನುಗುಣವಾಗಿ ಖರೀದಿಸಲು ಪ್ರಮಾಣ ನಿಗದಿ ಪಡಿಸಲಾಗುವುದು.

ಕೈಮಗ್ಗ ಅಭಿವೃದ್ಧಿ ನಿಗಮದ ಮೂಲಕ ಉತ್ಪನ್ನಗಳಿಗೆ ಡಿಜಿಟಲ್ ವೇದಿಕೆಯಲ್ಲೂ ಮಾರುಕಟ್ಟೆ ಸೌಲಭ್ಯ ಕಲ್ಪಿಸಲಾಗುವುದು ಎಂದರು. ಮನೆಯಲ್ಲಿಯೇ ಕೆಲಸ ಮಾಡುತ್ತಿರುವ ನೇಕಾರರಿಗೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಪಡೆಯುವ ಪ್ರಕ್ರಿಯೆ ಕುರಿತು ಸೂಕ್ತ ಮಾರ್ಗಸೂಚಿ ಹೊರಡಿಸಿ, ನೇಕಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಜವಳಿ, ಸಿದ್ಧ ಉಡುಪು ನೀತಿಯಡಿ ಸ್ಥಾಪಿಸಿರುವ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ಕೌಶಲಾಭಿವೃದ್ಧಿ ಇಲಾಖೆಗೆ ವರ್ಗಾಯಿಸಿರುವುದನ್ನು ರದ್ದುಪಡಿಸಿ, ಜವಳಿ ಇಲಾಖೆಯಡಿ ಮುಂದುವರಿಸಲು ನಿರ್ಧರಿಸ ಲಾಯಿತು. ಸಚಿವರಾದ ಗೋವಿಂದ ಕಾರಜೋಳ, ಶಿವರಾಮ ಹೆಬ್ಬಾರ, ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅಭಯ ಪಾಟೀಲ, ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಿದ್ದು ಸವದಿ, ಸಿಎಂ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ ಪ್ರಸಾದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net