

ಹುಣಸೂರು: ನಗರದ ಎಚ್.ಡಿ.ಕೋಟೆ ವೃತ್ತದಲ್ಲಿ ಬುಧವಾರ ನಗರ ಪೊಲೀಸ್ ಠಾಣೆ, ಮಾಜಿ ಸೈನಿಕರ ಸಹಯೋಗದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮ ಆಚರಿಸಲಾಯಿತು. ಕಾರ್ಗಿಲ್ ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ನಗರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎಸ್.ಎಂ.ದೇವೇಂದ್ರ ಮಾತನಾಡಿ, 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಭಾರತೀಯ ಸೈನಿಕರ ಶೌರ್ಯ, ಸಾಹಸಗಳು ಮತ್ತು ತಾಯಿನಾಡಿನ ಮೇಲಿರುವ ಅವರ ಪ್ರೇಮ, ಭಕ್ತಿಗೆ ಜ್ವಲಂತ ಸಾಕ್ಷಿಯಾಗಿದೆ. ಪ್ರಕೃತಿಯ ವೈರುಧ್ಯದ ನಡುವೆಯೂ ಶತ್ರು ದೇಶವನ್ನು ಹಿಮ್ಮೆಟ್ಟಿಸಿ ಜಯ ಸಾಧಿಸಿದ ಯುದ್ಧ ಅದಾಗಿತ್ತು. ಯುದ್ಧದಲ್ಲಿ ವೀರ ಮರಣ ಹೊಂದಿದ ನಮ್ಮ ಸೈನಿಕರನ್ನು ನಾವೆಂದೂ ಮರೆಯಬಾರದು. ದೇಶದ ಗಡಿ ಕಾಯುವ ಸೈನಿಕರು ನಮ್ಮೆಲ್ಲರ ಜೀವ ಮತ್ತು ಜೀವನವನ್ನು ಕಾಪಾಡಿದವರಾಗಿದ್ದು ಯುವ ಸಮೂಹ ವೀರ ಯೋಧರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದರು.
ಗುರುಪುರ ಟಿಬೇಟಿಯನ್ ನಿರಾಶ್ರಿತರ ಕ್ಯಾಂಪ್‌ನ ಮಾಜಿ ಸೈನಿಕ ತಾಶಿ ಮಾತನಾಡಿ, ಕಾರ್ಗಿಲ್ ಎನ್ನುವುದು ದೇಶದ ಸೈನಿಕರ ವೃತ್ತಿ ಜೀವನದ ಪ್ರಮುಖ ಘಟ್ಟವಾಗಿರುತ್ತದೆ. ಅಲ್ಲಿ ಕರ್ತವ್ಯ ಪೂರೈಸಿದ ಸೈನಿಕ ದೇಶದ ಯಾವುದೇ ಭಾಗದಲ್ಲೂ ಸೈನಿಕನಾಗಿ ಸೇವೆ ಸಲ್ಲಿಸಬಲ್ಲ. ಕಾರ್ಗಿಲ್‌ನಲ್ಲಿ ನಮ್ಮ ಸೈನಿಕರು ಮೆರೆದ ಸಾಹಸ, ಶೌರ್ಯಗಳನ್ನು ಇಂದಿನ ಯುವ ಸಮೂಹ ಮರೆಯಬಾರದು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯಕ್ಕೆ ಸೇರುವ ಮೂಲಕ ದೇಶ ಸೇವೆಗೆ ಮುಂದಾಗಬೇಕು ಎಂದು ಹೇಳಿದರು.
ಪಿಎಸ್‌ಐ ಲೋಕೇಶ್, ಮಂಜುನಾಥ್, ಮಂಜುನಾಥ್ ಗಣ್ಣಳ್ಳಿ, ಆಟೋ ಚಾಲಕರು, ವಿದ್ಯಾರ್ಥಿಗಳು ಹಾಜರಿದ್ದರು.