ವಿಷ ಬೀಜ ಬಿತ್ತುತಿದ್ದಾರೆ ಸಿದ್ದರಾಮಯ್ಯ: ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಹೇಳಿಕೆ

4
Published on

ತುಮಕೂರು: ದೇಶದಲ್ಲಿ ಯಾವುದೇ ರಾಜಕೀಯ ಪಕ್ಷ ಸುದೀರ್ವಾಗಿ ಆಡಳಿತ ನಡೆಸಿಲ್ಲ. ಹಾಗಾಗಿ, ಪ್ರಾದೇಶಿಕ ಪಕ್ಷಗಳೆಲ್ಲಾ ಒಗ್ಗೂಡಿ ಆಡಳಿತ ನಡೆಸುವ ಕಾಲ ಸನ್ನಿಹಿತವಾಗಿದೆ ಎಂದು ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ಅಭಿಪ್ರಾಯಪಟ್ಟರು.

ಬಳ್ಳಗೆರೆಯಲ್ಲಿ ಶುಕ್ರವಾರ ಶ್ರೀ ಚಿಕ್ಕಮ್ಮದೇವಿ ನೂತನ ದೇವಾಲಯ ಮತ್ತು ಮೂಲಶಿಲಾಬಿಂಬ ಪ್ರತಿಷ್ಠಾಪನೆ ಹಾಗೂ ವಿಮಾನಗೋಪುರ ಪ್ರತಿಷ್ಠಾಪನಾ ಮಹೋತ್ಸವದಲ್ಲಿ ಮಾತನಾಡಿದರು.

ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ಇದೆ, ರಾಜಧಾನಿಯಲ್ಲಿ ಏನೇನು ನಡೆಯುತ್ತಿದೆ ಎಂಬ ವಿದ್ಯಮಾನಗಳ ಅರಿವಿದೆ, ಇದುವರೆಗೂ ರಾಜ್ಯದ ಮತದಾರರು ನಮಗೆ ಪೂರ್ಣ ಬಹುಮತ ನೀಡಿಲ್ಲ, ಸಿದ್ದರಾಮಯ್ಯನ ವಿರೋಧದ ನಡುವೆಯೂ 25 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದು ಕುಮಾರಸ್ವಾಮಿ ಸಾಧನೆ ಎಂದರು.

ಸಿದ್ದರಾಮಯ್ಯ ಅಹಿಂದ ಸೋಗಿನಲ್ಲಿ ಜನರಲ್ಲಿ ವಿಷ ಬೀಜ ಬಿತ್ತುತಿದ್ದಾರೆ, ನಾವು ಎಲ್ಲ ಜನಾಂಗದವರಿಗೂ ಒಳ್ಳೆಯ ಕೆಲಸವನ್ನೇ ಮಾಡಿದ್ದೇವೆ. ಸ್ಥಳಿಯ ಸಂಸ್ಥೆಗಳಲ್ಲಿ ಹಿಂದುಳಿದವರಿಗೆ ಮೀಸಲಾತಿ ಕೊಟ್ಟಿದ್ದು ನಾನು ಪ್ರಧಾನಿಯಾಗಿದ್ದಾಗ. ಸಿದ್ದರಾಮಯ್ಯ ಅದನ್ನು ತಿರುಚಿ ಹಿಂದುಳಿದವರನ್ನು ನಮ್ಮವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಹಿಂದುಳಿದವರಿಗೂ ಮಹಿಳೆಯರಿಗೂ ಮೀಸಲಾತಿ ಕಲ್ಪಿಸಿದ್ದು ಇದೇ ದೇವೇಗೌಡ ಎಂದರು.

ರಾಜ್ಯದಿಂದ 16 ಸೀಟು ಗೆದ್ದು ರಾಷ್ಟ್ರದ ಪ್ರಧಾನಿಯಾದೆ, ಅಧಿಕಾರವಿದ್ದಾಗ ನೀರಿನ ವಿಚಾರದಲ್ಲಿ ಹಲವು ಕೆಲಸ ಮಾಡಿದ ತೃಪ್ತಿಯಿದೆ. ಆಲಮಟ್ಟಿ, ನಾರಾಯಣಪುರ ಬಲದಂಡೆ, ಕೆಆರ್​ಎಸ್​ ನೀರಿನ ಬಗ್ಗೆ ಹೋರಾಟ ಮಾಡಿದ್ದೇನೆ, ಕಾಂಗ್ರೆಸ್​ನ ಮೇಕೆದಾಟು ಹೋರಾಟ ರಾಜಕೀಯ ಲಾಭಕ್ಕಷ್ಟೇ, ಅವರಿಗೆ ಬದ್ಧತೆ ಇಲ್ಲ ಎಂದರು.

ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ರಾಜ್ಯದ ರೈತರು, ಬಡವರ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಿರುವ ಜೆಡಿಎಸ್​ ವರಿಷ್ಠ ಎಚ್​.ಡಿ.ದೇವೇಗೌಡ ರಾಜ್ಯಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ರಾಜ್ಯದ ಜನತೆ ಅವರ ಪರವಾಗಿ ನಿಲ್ಲಬೇಕಿದೆ ಎಂದರು.

ವಿದ್ಯಾ ಚೌಡೇಶ್ವರಿ ಸಂಸ್ಥಾನ ಮಠದ ಶ್ರೀ ಬಾಲಮಂಜುನಾಥ ಸ್ವಾಮೀಜಿ, ಶಾಸಕ ಡಿ.ಸಿ.ಗೌರಿಶಂಕರ್​, ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ, ಜಿಲ್ಲಾಧ್ಯಕ್ಷ ಆರ್​.ಸಿ.ಅಂಜನಪ್ಪ, ಗೌರವಾಧ್ಯಕ್ಷ ಟಿ.ಆರ್​.ನಾಗರಾಜು, ಮುಖಂಡರಾದ ನರಸೇಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net