

ಲಿಂಗದಹಳ್ಳಿ: ಇಂದಿನ ಡಿಜಿಟಲ್ ಯುಗದಲ್ಲಿ ಪತ್ರಿಕೆಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿರುವುದಕ್ಕೆ ಓದುಗರ ವಿಶ್ವಾಸಾರ್ಹತೆಯೇ ಮುಖ್ಯ ಕಾರಣ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ತರೀಕೆರೆ ತಾಲೂಕು ಪತ್ರಕರ್ತರ ಸಂಘದಿಂದ ಲಿಂಗದಹಳ್ಳಿ ಪ್ರೌಢಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆಯನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿ, ಸರ್ಕಾರ ಪತ್ರಕರ್ತರ ಅನುಕೂಲಕ್ಕಾಗಿ ಉಚಿತ ಬಸ್ ಪಾಸ್ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದ್ದು ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಲಿಂಗದಹಳ್ಳಿ ಹೋಬಳಿಯ ಪತ್ರಿಕೆಗಳ ವಿತರಕರಿಗೆ ಕಾರ್ಮಿಕ ಇಲಾಖೆಯಿಂದ ಕಾರ್ಮಿಕ ಕಾರ್ಡ್‌ಗಳನ್ನು ವಿತರಿಸಿದರು.
ಪತ್ರಿಕಾ ಪಿತಾಮಹಾ ಡಿ.ವಿ.ಗುಂಡಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಸಮಾಜಸೇವಕ ಗುಳ್ಳದಮನೆ ಗೋಪಾಲಕೃಷ್ಣ ಮಾತನಾಡಿ, ಪತ್ರಕರ್ತರು ಸಮಾಜವನ್ನು ತಿದ್ದುವ ಕಾರ್ಯ ಮಾಡುತ್ತ ದೇಶದ ಅಭಿವೃದ್ಧಿಗೆ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.
ತರೀಕೆರೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಕೃಷ್ಣನಾಯ್ಕ, ಕಾರ್ಮಿಕ ಇಲಾಖೆ ಅಧಿಕಾರಿ ಪ್ರಭಾಕರ್, ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಎನ್.ಎ.ಕೃಷ್ಣನಾಯ್ಕ, ತಾಪಂ ಮಾಜಿ ಅಧ್ಯಕ್ಷ ಬಿ.ಆರ್.ರವಿ, ಸಮಾಜ ಸೇವಕರಾದ ಗುಳ್ಳದಮನೆ ಗೋಪಾಲಕೃಷ್ಣ, ಹಿರಿಯ ವಕೀಲ ಸುರೇಶ್‌ಚಂದ್ರ, ತಾಲೂಕು ಬಂಜಾರ ಸಮಾಜದ ಅಧ್ಯಕ್ಷ ಎಚ್.ಎಲ್.ಮಂಜುನಾಥ್, ಗ್ರಾಪಂ ಉಪಾಧ್ಯಕ್ಷ ರಮೇಶ್ ನಾಯ್ಕ, ತಾಲೂಕು ಬಂಜಾರ ಸಮಾಜದ ಗೌರವಾಧ್ಯಕ್ಷ ಆರ್.ಸತ್ಯಪ್ಪ, ಲಿಂಗದಹಳ್ಳಿ ಅಂಚೆ ಪಾಲಕ ಚಂದ್ರನಾಯ್ಕ, ಡಿಎಸ್‌ಎಸ್ ಸಂಚಾಲಕ ರಾಜು ಇತರರಿದ್ದರು.