

ಸೂಕ್ತ ಅನುದಾನವಿಲ್ಲದೆ ಸಂಕಷ್ಟದಲ್ಲಿರುವ ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳಿಗೆ ಕೂಡಲೇ ಅನುದಾನ ನೀಡಬೇಕೆಂದು ಒತ್ತಾಯಿಸಿ ಕದಂಬ ಸೈನ್ಯದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಚಾಮರಾಜನಗರ ವಿವಿ ಸಂಬಳ ನೀಡಲಾಗದಷ್ಟು ಸಂಕಷ್ಟಕ್ಕೆ ಸಿಲುಕಿದ್ದು, ಉನ್ನತ ಶಿಕ್ಷಣದಲ್ಲಿ ತೀರಾ ಹಿಂದುಳಿದಿದೆ. ಬುಡಕಟ್ಟು ಜನಾಂಗದ, ರೈತರ, ಶೋಷಿತರ ಮಕ್ಕಳ ಉನ್ನತ ಶಿಕ್ಷಣಕ್ಕೆ ತೊಡಕಾಗಿದೆ. ಇದರಿಂದ ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ವಿವಿ ಮುಚ್ಚಿದರೆ ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. 30 ಸಾವಿರ ವಿದ್ಯಾರ್ಥಿಗಳಿರುವ ಬಾಗಲಕೋಟೆ ವಿವಿಯಲ್ಲಿ ಕನಿಷ್ಠ ಸ್ಥಳಾವಕಾಶ, ಮೂಲ ಸೌಕರ್ಯಗಳೂ ಇಲ್ಲ. ಕ್ಯಾಂಪಸ್ ಭೂಮಿ ವಿವಿಗೆ ಹಸ್ತಾಂತರ ಆಗಿಲ್ಲ. ಶೇ.90ರಷ್ಟು ಪರಿಶಿಷ್ಟ ಜಾತಿ, ಪಂಗಡಗಳ ವಿದ್ಯಾರ್ಥಿಗಳಿರುವ ವಿವಿ ಆರ್ಥಿಕವಾಗಿ, ಭೌತಿಕವಾಗಿ ಸದೃಢವಾಗಿಲ್ಲ. ಜಾನಪದ ಅಧ್ಯಯನಕ್ಕಿರುವ ಏಕೈಕ ಹಾವೇರಿ ವಿವಿಗೆ ಅಂತರಿಕ ಆದಾಯ, ಸರ್ಕಾರದ ಅನುದಾನ ತೀರಾ ಕಡಿಮೆ. ಇದರಿಂದ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ. ಬೋಧಕ ಮತ್ತು ಬೋಧಕೇತರ ಹುದ್ದೆಗಳ ವೇತನ ನೀಡಲೂ ಹಣ ಇಲ್ಲ. ಅನುದಾನದ ಕೊರತೆಯಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ದೂರಿದರು.
ಬೆಂಗಳೂರು ಯುವಿಸಿಇ ವಿವಿಗೆ ಕ್ಯಾಂಪಸ್ ಇಲ್ಲ. ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಕಾಮಧೇನು ಈ ವಿವಿ. 2024ರಲ್ಲಿ ಶೇ.84ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತಿದೆ. ಐದು ವರ್ಷಕ್ಕೆ 850 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು. ಅಗತ್ಯ ಬೋಧಕರನ್ನು ನೇಮಿಸಬೇಕು. ಜತೆಗೆ ವಿಟಿಯು ವಿವಿಗೆ ವಿದ್ಯಾರ್ಥಿಗಳ ಶುಲ್ಕವೇ ಆಧಾರ. 44 ಕೋಟಿ ರೂ. ವೇತನಾನುದಾನಕ್ಕೆ ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿಲ್ಲ. ಇದರಿಂದ ವಿವಿ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಹೀಗಾಗಿ ಸಂಶೋಧನೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಮಂಡ್ಯ ವಿವಿಯಲ್ಲಿ ಬೋಧಕ ಮತ್ತು ಪದಾಧಿಕಾರಿಗಳ ಹುದ್ದೆ ಖಾಲಿಯಾಗಿ ಎರಡು ವರ್ಷವಾದರೂ ಸರ್ಕಾರ ಭರ್ತಿ ಮಾಡಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಸಿಗುತ್ತಿಲ್ಲ. ಸಂಶೋಧನೆಗೆ ಆದ್ಯತೆ ಸಿಗುತ್ತಿಲ್ಲ. ಜಿಲ್ಲೆಯ ಮಂತ್ರಿಗಳು, ಶಾಸಕರು, ವಿಧಾನ ಪರಿಷತ್ ಸದಸ್ಯರು ಸಂಪೂರ್ಣ ನಿರ್ಲಕ್ಷೃ ವಹಿಸಿದ್ದಾರೆ ಎಂದು ಕಿಡಿ ಕಾರಿದರು.
ಮೈಸೂರು ವಿವಿ ಅರ್ಥಿಕ ಸಂಕಷ್ಟದಲ್ಲಿದೆ. ಗದಗ ಗ್ರಾಮೀಣ ವಿವಿಗೆ ಕುಲಪತಿಯೂ ಇಲ್ಲ, ಹಣವೂ ಇಲ್ಲ. ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ವಿವಿ ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಸಾಧನೆ ಮಾಡಿದ್ದರೂ ಆರ್ಥಿಕ ಸಂಪನ್ಮೂಲದ ಕೊರತೆಯಿಂದ ನರಳುತ್ತಿದೆ. ನಮ್ಮಲ್ಲಿ ಆಡಳಿತ ಸೂತ್ರ ಹಿಡಿದವರು ಶಿಕ್ಷಣ ಕ್ಷೇತ್ರವನ್ನು ಪ್ರಯೋಗಶಾಲೆ ಎಂದು ಭಾವಿಸಿದಂತಿದೆ. ಪ್ರಾಥಮಿಕ ಶಿಕ್ಷಣದಿಂದ ಉನ್ನತ ಶಿಕ್ಷಣದವರೆಗೂ ಈ ಮಾತು ಅನ್ವಯಿಸುತ್ತದೆ. ಬಹಳ ಗಂಭೀರವಾಗಿ ವರಿಗಣಿಸಬೇಕಾಗಿದ್ದ ಕ್ಷೇತ್ರವನ್ನು ಲಘುವಾಗಿ ಪರಿಗಣಿಸಲಾಗುತ್ತಿದೆ. ದೂರಗಾಮಿ ಪರಿಣಾಮಗಳ ಬಗೆಗೆ ಲಕ್ಷೃವೇ ಇಲ್ಲ. ಹೀಗಾಗಿ ಕೂಡಲೇ ಕರ್ನಾಟಕದ ಎಲ್ಲ ವಿಶ್ವ ವಿದ್ಯಾಲಯಗಳಿಗೂ ಶೈಕ್ಷಣಿಕ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಕದಂಬಸೈನ್ಯದ ಅಧ್ಯಕ್ಷ ಬೇಕ್ರಿ ರಮೇಶ್, ರಾಜ್ಯ ಸಂಚಾಲಕ ಬಿ.ಶಿವಕುಮಾರ್ ಮೈಸೂರು, ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್, ರಾಜ್ಯ ಸಮಿತಿ ಸದಸ್ಯ ನಾ.ಮಹದೇವಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದ ಉಪಾಧ್ಯಕ್ಷ ಮಹೇಶ್ ಕುಮಾರ್, ಜಿಲ್ಲಾ ಸಮಿತಿ ಸದಸ್ಯರಾದ ಟಗರು ಮಹಾದೇವ, ಟೈಲರ್ ಮಹದೇವು, ಮುಖಂಡರಾದ ಸ್ವಾಮಿ, ವಿಷ್ಣು ರವಿ ನಂಜನಗೂಡು, ಆರಾಧ್ಯ ಗುಡಗನಹಳ್ಳಿ, ಸಲ್ಮಾನ್, ರಾಮು ಚಿಕ್ಕೆಗೌಡನದೊಡ್ಡಿ ಇತರರಿದ್ದರು.