

ಯಳಂದೂರು: ವಿಶ್ವಕರ್ಮರು ಇಡೀ ವಿಶ್ವಕ್ಕೆ ಅನ್ನ ನೀಡುವ ರೈತನಿಗೆ ಆಯುಧಗಳು, ಎಲ್ಲರೂ ಸುಂದರವಾಗಿ ಕಾಣುವ ಆಭರಣವನ್ನು ತಯಾರಿಸುವ ಕುಲಕಸುಬಿನವರಾಗಿದ್ದು, ಈ ಜನಾಂಗದ ಮೂಲ ಪುರುಷ ವಿಶ್ವಕರ್ಮರ ಜಯಂತಿಯನ್ನು ಎಲ್ಲರೂ ಆಚರಿಸುವಂತಾಗಬೇಕು ಎಂದು ಸಮುದಾಯದ ಮುಖಂಡ ರಾಜಾಚಾರ್ ತಿಳಿಸಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವಕರ್ಮ ಜನಾಂಗ ಹಿಂದುಳಿದ ವರ್ಗಗಳ ಸಾಲಿನಲ್ಲಿದ್ದು, ಶೈಕ್ಷಣಿಕವಾಗಿ ಇನ್ನೂ ಹಿಂದುಳಿದಿದೆ. ಹೆಚ್ಚಾಗಿ ತಮ್ಮ ಕುಲ ಕಸುಬನ್ನೇ ಮೂಲವಾಗಿಸಿಕೊಂಡಿದ್ದಾರೆ ಎಂದರು.
ಪ್ರಸ್ತುತ ಈ ಕಸುಬನ್ನು ವೈಜ್ಞಾನಿಕವಾಗಿ ರೂಢಿಸಿಕೊಳ್ಳುವ ಅವಶ್ಯಕತೆ ಇದೆ. ಇದರೊಂದಿಗೆ ಹೊಸ ಯಂತ್ರಗಳ ಆವಿಷ್ಕಾರವಾಗಿದ್ದು, ಇದನ್ನು ಬಳಸಿಕೊಳ್ಳಬೇಕಿದೆ. ಆದರೆ ಇದಕ್ಕೆ ಆರ್ಥಿಕ ನೆರವಿನ ಕೊರತೆಯಿದ್ದು, ಇದಕ್ಕೆ ಬೇಕಾದ ತರಬೇತಿ ಪಡೆಯಬೇಕಿದೆ. ಇದನ್ನು ಕೊಡಿಸುವ ನಿಟ್ಟಿನಲ್ಲಿ ಸರ್ಕಾರಗಳು ಹೆಚ್ಚಿನ ಆದ್ಯತೆ ವಹಿಸಬೇಕು. ಇದಕ್ಕೆ ಬೇಕಾಗುವ ಸವಲತ್ತುಗಳನ್ನು ಒದಗಿಸುವಲ್ಲಿ ಚುನಾಯಿತ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಆನಂದಪ್ಪ ನಾಯಕ್ ವಿಶ್ವಕರ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶಿರಸ್ತೇದಾರ್ ಶಾಂತಿ, ಪಶು ಸಂಗೋಪನಾ ಇಲಾಖೆ ಸುಗಂಧರಾಜನ್, ರಾಜಸ್ವ ನಿರೀಕ್ಷಕ ಯದುಗಿರಿ ಸಬ್ ರಿಜಿಸ್ಟ್ರಾರ್ ರುದ್ರಯ್ಯ, ವಿಶ್ವಕರ್ಮ ಸಂಘದ ತಾಲೂಕು ಅಧ್ಯಕ್ಷ ಕುಮಾರ್, ಭಾಗ್ಯಮ್ಮ ಸೋಮಣ್ಣ, ಮುಖಂಡರಾದ ವೈ.ಎಂ.ಭಾನುಪ್ರಕಾಶ್, ಸಿದ್ದಪ್ಪಾಜಿ, ನಾಗರಾಜು, ಸೋಮಣ್ಣ, ರಾಜು ಮತ್ತಿತರಿದ್ದರು.